ಕುಂಬಳೆ: ಕುಂಬಳೆ ಸನಿಹದ ಪೆರ್ವಾಡ್, ಮೊಗ್ರಾಲ್ ನಾಂಗಿ ಪ್ರದೇಶದಲ್ಲಿ ಸಮುದ್ರ ಕೊರೆತ ಹೆಚ್ಚಾಗುತ್ತಿದ್ದು, ಈ ಪ್ರದೇಶದಲ್ಲಿ ಭಾರೀ ಹಾನಿಯುಂಟಾಗಿದೆ. ಮೊಗ್ರಾಲ್ ನಾಂಗಿ ಕಡಪ್ಪುರ ಪ್ರದೇಶದಲ್ಲಿ ಎರಡು ವರ್ಷಗಳ ಹಿಂದೆ ನಿರ್ಮಿಸಲಾದ 'ಬೀಚ್ ವ್ಯೂ ರೆಸಾರ್ಟ್' ಸಮುದ್ರ ಕೊರೆತದಿಂದ ಕೊಚ್ಚಿಹೋಗುವ ಸ್ಥಿತಿಯಲ್ಲಿದೆ. ರೆಸಾರ್ಟ್‍ನ ತಡೆಗೋಡೆಗಳು ಮತ್ತು ಒಂದು ಪಾಶ್ರ್ವ ಈಗಾಗಲೇ ಸಮುದ್ರ ಪಾಲಾಗಿದೆ. ಪೇರಾಲ್ ಕಣ್ಣೂರು ಅಬ್ದುಲ್ಲಾ ಮಾಸ್ತರ್ ಅವರ ಪುತ್ರ ಮುಹಮ್ಮದ್ ಇರ್ಷಾದ್ ಅವರ ಮಾಲಿಕತ್ವದಲ್ಲಿರುವ ಈ ರೆಸಾರ್ಟ್ ಇಂದು ಅಪಾಯದಂಚಿನಲ್ಲಿದೆ.
ಎರಡು ವರ್ಷಗಳ ಹಿಂದೆ ಮುಹಮ್ಮದ್ ಮತ್ತು ಖಾಲಿದ್ ಎಂಬವರ ಮನೆಗಳು ಸಮುದ್ರದ ಕೊರೆತದಿಂದ ಕಡಲಗರ್ಭ ಸೇರಿದೆ. ಇದರ ಸಮೀಪವೇ ಬೀಚ್ ವ್ಯೂ ರೆಸಾರ್ಟ್ ನಿರ್ಮಿಸಲಾಗಿದ್ದು, ಸಮುದ್ರ ಕೊರೆತದ ಅಬ್ಬರ ಮುಂದುವರಿದಲ್ಲಿ ರೆಸಾರ್ಟ್ ಹೇಳಹೆಸರಿಲ್ಲದಂತೆ ನಾಶವಾಗುವ ಭೀತಿಯಲ್ಲಿದೆ. ಜಿಲ್ಲಾದ್ಯಂತ ಮಳೆ ಮುಂದುವರಿದಿದ್ದು, ನಾನಾ ಕಡೆ ಸಮುದ್ರ ಪ್ರಕ್ಷುಬ್ಧಗೊಂಡಿರುವುದರಿಂದ ಸಮುದ್ರ ಕೊರೆತವೂ ಹೆಚ್ಚಾಗಿದೆ. ಈಗಾಗಲೇ ಉಪ್ಪಳ ಶಾರದಾನಗರ, ಹನುಮಾನ್ ನಗರ, ಆರಿಕ್ಕಾಡಿ ಸೇರಿದಂತೆ ನಾನಾ ಕಡೆ ಸಮುದ್ರಕೊರೆತದಿಂದ ಅಪಾರ ಹಾಣಿ ಸಂಭವಿಸಿದೆ.