ಕಾಸರಗೋಡು: ಮುಖ್ಯಮಂತ್ರಿಗಳು ನೀಡಿದ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ತಿರುವನಂತಪುರ ಸೆಕ್ರೆಟರಿಯೇಟ್‍ನಲ್ಲಿ ತಾಯಂದಿರು ಮತ್ತು ಮಕ್ಕಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸೇರಿದಂತೆ ಧರಣಿ ನಡೆಸಲು ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ಹೋರಾಟ ಸಮಿತಿ ನಿರ್ಧರಿಸಿದೆ. ಸಿ.ಎಚ್.ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.
1,031 ಸಂತ್ರಸ್ತರನ್ನು ಪಟ್ಟಿಯಿಂದ ಹೊರತುಪಡಿಸಿರುವುದಾಗಿ ಸಾಮಾಜಿಕ ನ್ಯಾಯ ಖಾತೆ ಸಚಿವೆ ಆರ್.ಬಿಂದು ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆ ವಿರೋಧಿಸಿ ಜುಲೈ 17ರಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲೂ ನಿರ್ಧರಿಸಲಾಗಿದೆ. 2017ರಲ್ಲಿ ನಡೆಸಲಾದ ವಿಶೇಷ ವೈದ್ಯಕೀಯ ಶಿಬಿರದಲ್ಲಿ ಪತ್ತೆಹಚ್ಚಲಾದ 1031 ಮಂದಿ ಸಂತ್ರಸ್ತರನ್ನು ಸರ್ಕಾರದ ಎಲ್ಲ ಸವಲತ್ತುಗಳಿಗೆ ಒಳಪಡಿಸುವಂತೆ ಆಗ್ರಹಿಸಿ ಕಳೆದ ನಾಲ್ಕುವರೆ ತಿಂಗಳಿಂದ ಕಾಞಂಗಾಡ್ ಮಿನಿ ಸಿವಿಲ್ ಸ್ಟೇಷನ್ ಎದುರು ಸತ್ಯಾಗ್ರಹ ನಡೆಸಿಕೊಂಡು ಬರಲಾಗಿತ್ತು. ಸಂತ್ರಸ್ತರು ನಡೆಸಿಕೊಂಡು ಬರುತ್ತಿದ್ದ ನಿರಾಹಾರ ಸತ್ಯಾಗ್ರಹದ ಬಗ್ಗೆ ಶಾಸಕ ಹಾಗೂ ಮಾಜಿ ಸಚಿವ ಇ.ಚಂದ್ರಶೇಖರನ್ ಅವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಐದು ಮಂದಿ ಶಾಸಕರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮುಂದೆ ಈ ವಿಷಯ ಪ್ರಸ್ತಾಪಿಸಿದ್ದು, ಸಕಾರಾತ್ಮಕ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ನೀಡಿದ ಭರವಸೆಯನ್ವಯ ಧರಣಿ ಹಿಂಪಡೆಯಲಾಗಿತ್ತು. ಸಂತ್ರಸ್ತರ ಬಗ್ಗೆ ಜಿಲ್ಲಾಡಳಿತವೂ ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದಾಗಿ ಸಭೆಯಲ್ಲಿ ಅಭಿಪ್ರಾಯಪಡಲಾಯಿತು.
2017ರಲ್ಲಿ ನಡೆದ ವೈದ್ಯಕೀಯ ಶಿಬಿರದಲ್ಲಿ ಪತ್ತೆಹಚ್ಚಲಾದ 1905 ಮಂದಿ ಸಂತ್ರಸ್ತರಲ್ಲಿ 287 ಮಂದಿಯನ್ನು ಮಾತ್ರ ಪಟ್ಟಿಗೆ ಸೇರಿಸಲಾಗಿತ್ತು. ನಂತರ ನಡೆಸಲಾದ ಹೋರಾಟದ ಫಲವಗಿ ಮೊದಲ ಹಂತದಲ್ಲಿ 76 ಹಾಗೂ ನಂತರ 511ಮಂದಿಯನ್ನು ಪಟ್ಟಿಗೆ ಸೇರ್ಪಡೆಗೊಳಿಸಿ ಬಾಕಿ 1031ಮಂದಿಯನ್ನು ಸಂತ್ರಸ್ತರ ಪಟ್ಟಿಯಿಂದ ಹೊರಗಿರಿಸಲಾಗಿತ್ತು. ಪ್ರಸಕ್ತ ಈ ಪಟ್ಟಿಯನ್ನು ಬುಡಮೇಲುಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದ್ದು, ಸಂತ್ರಸ್ತರ ವಿರುದ್ಧ ಮುಖ್ಯಮಂತ್ರಿ ಮತ್ತು ಆಡಳಿತ ವ್ಯವಸ್ಥೆ ತೋರುವ ವಂಚನೆ ಖಂಡಿಸಿ ಸಮಿತಿ ಪ್ರಬಲ ಹೋರಾಟ ಮುಂದುವರಿಸಲು ಸಭೆ ತೀರ್ಮನಿಸಿದೆ.
ಇ. ತಂಬಾನ್, ಶ್ರೀಧರನ್ ಮಡಿಕೈ, ಬೇಬಿ ಅಂಬಿಲಿ, ಅಂಬಾ ಪ್ರಸಾದ್ ಕಾಞಂಗಾಡ್, ವಿ.ವಿ.ಕೃಷ್ಣನ್, ಅಂಬಲತ್ತರ ಕುಂಜಿಕೃಷ್ಣನ್, ಪಿ.ಕೆ.ನಾರಾಯಣನ್, 'ಕೆ.ಪಿ.ಕುಮಾರನ್ ಮತ್ತು ಜಗದಮ್ಮ ಉಪಸ್ಥಿತರಿದ್ದರು. ಪಿ ಶೈನಿ ಸ್ವಾಗತಿಸಿದರು. ಪ್ರಸನ್ನ ಕಾಞಂಗಾಡ್ ವಂದಿಸಿದರು.