ಮುಂಬೈ: ಮುಂಬೈನ ಕೆಲವು ಪ್ರದೇಶಗಳಲ್ಲಿ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಬೆಳಿಗ್ಗೆ 7ರವರೆಗಿನ ಆರು ಗಂಟೆಗಳ ಅವಧಿಯಲ್ಲಿ 30 ಸೆಂ.ಮೀಗೂ ಹೆಚ್ಚು ಪ್ರಮಾಣದ ಮಳೆಯಾಗಿದೆ. ಇದರಿಂದಾಗಿ ಕೇಂದ್ರ ರೈಲ್ವೆ ವಿಭಾಗದ ಉಪನಗರ ರೈಲು ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು.
'ಹಳಿಗಳ ಮೇಲೆ ನೀರು ನಿಂತಿದ್ದ ಕಾರಣ, ರೈಲುಗಳ ಸಂಚಾರದಲ್ಲಿ ವ್ಯತ್ಯಯಗಳಾಗಿವೆ. ಹೆಚ್ಚು ಸಾಮರ್ಥ್ಯದ ಪಂಪ್‌ಗಳನ್ನು ಬಳಸಿಕೊಂಡು ಹಳಿಗಳ ಮೇಲೆ ಹರಿಯುತ್ತಿದ್ದ ನೀರನ್ನು ಖಾಲಿ ಮಾಡಲಾಯಿತು' ಎಂದು ಪಶ್ಚಿಮ ರೈಲ್ವೆಯ ವಕ್ತಾರರು ತಿಳಿಸಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ರನ್‌ವೇ ಕಾರ್ಯಾಚರಣೆಯಲ್ಲಿ ತೊಡಕು ಉಂಟಾಗಿತ್ತು. ಇದರಿಂದ 50 ವಿಮಾನಗಳ ಸಂಚಾರವು ರದ್ದಾಗಿದೆ. ಅಹಮದಾಬಾದ್, ಹೈದರಾಬಾದ್, ಇಂದೋರ್ ಸೇರಿದಂತೆ ಹಲವು ನಗರಗಳಿಗೆ ಈ ವಿಮಾನಗಳ ಮಾರ್ಗ ಬದಲಾಯಿಸಲಾಯಿತು. 'ಮುಂದಿನ 24 ಗಂಟೆಗಳಲ್ಲಿ ಮುಂಬೈನಲ್ಲಿ ಮಿತವಾದ ಹಾಗೂ ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ' ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಹಾರಾಷ್ಟ್ರದಾದ್ಯಂತ ಮಳೆಯಾಗುತ್ತಿದೆ.
ಎರಡೂ ಸದನಗಳ ಕಲಾಪ ಮುಂದೂಡಿಕೆ: ಮಹಾರಾಷ್ಟ್ರದ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಕಲಾಪವನ್ನು ಒಂದು ದಿನದ ಮಟ್ಟಿಗೆ ಸೋಮವಾರ ಮುಂದೂಡಲಾಯಿತು. ಸಚಿವಾಲಯದ ಸಿಬ್ಬಂದಿ, ಶಾಸಕರು, ಸಚಿವರು ಎಲ್ಲರೂ ಮಳೆಯಿಂದಾಗಿ ವಿಧಾನಸಭೆಗೆ ಹಾಜರಾಗಲು ಸಾಧ್ಯವಾಗದ ಕಾರಣ ಕಲಾಪವನ್ನು ಮುಂದೂಡಲಾಯಿತು.
ಬೆಳಿಗ್ಗೆ 11 ಗಂಟೆಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಡೆಟ್ಟಾವರ್ ಅವರು, 'ಕೋಟಿ ಕೋಟಿ ಹಣ ಸುರಿದರೂ ಮುಂಗಾರು ಪೂರ್ವ ಸಿದ್ಧತೆಗಳನ್ನು ಸರ್ಕಾರವು ಸರಿಯಾಗಿ ನಿರ್ವಹಿಸಿಲ್ಲ' ಎಂದರು. 'ನಾವೆಲ್ಲರೂ ಚುನಾವಣೆಯಲ್ಲಿ ತೊಡಗಿಕೊಂಡಿದ್ದೆವು. ಗುತ್ತಿಗೆದಾರರು ಮೋರಿಗಳ ಸ್ವಚ್ಛತೆ ಕೈಗೊಳ್ಳಬೇಕಿತ್ತು. ಮೋರಿಗಳಿಂದ ಎತ್ತಿದ ಕಸವನ್ನು ರಸ್ತೆ ಬದಿಯಲ್ಲಿಯೇ ಹಾಕಿದ್ದಾರೆ. ಮಳೆನೀರಿನಿಂದಾಗಿ ಆ ಕಸ ಮತ್ತೆ ಮೋರಿ ಸೇರಿದೆ' ಎಂದು ಬಿಜೆಪಿಯ ಆಶಿಶ್ ಶೋಲಾರ್ ಹೇಳಿದರು.
ಹಳಿಗಳ ಮೇಲೆ ನೀರು ತುಂಬಿದ ದೃಶ್ಯವು ಮುಂಬೈನ ರೈಲು ನಿಲ್ದಾಣವೊಂದರಲ್ಲಿ ಕಂಡುಬಂದಿತು -ಪಿಟಿಐ ಚಿತ್ರಮುಂಬೈನಲ್ಲಿ ಮಕ್ಕಳಿಬ್ಬರು ಮಳೆಯನ್ನು ಸಂಭ್ರಮಿಸಿದರು -ಎಎಫ್‌ಪಿ ಚಿತ್ರಮುಂಬೈ ನಗರದಲ್ಲಿ ರಸ್ತೆಗಳ ಮೇಲೆ ನೀರು ನಿಂತಿದ್ದರಿಂದ ವಾಹನ ಸವಾರರಿಗೆ ತೊಂದರೆಯಾಯಿತು -ಪಿಟಿಐ ಚಿತ್ರಮಳೆಯಲ್ಲಿ ಸಿಲುಕಿದ ವಿಪತ್ತು ನಿರ್ವಹಣಾ ಸಚಿವ
ಕಲಾಪದಲ್ಲಿ ಭಾಗಿಯಾಗಲು ಪರಿಹಾರ ಹಾಗೂ ಪುನರ್‌ವಸತಿ ಮತ್ತು ವಿಪತ್ತು ನಿರ್ವಹಣಾ ಸಚಿವ ಅನಿಲ್ ಪಾಟಿಲ್ ಹಾಗೂ ಎನ್‌ಸಿಪಿ ಶಾಸಕ ಅಮೋಲ್ ಮಿಟ್ಕರಿ ಅವರು ಹೌರಾ-ಮುಂಬೈ ರೈಲಿನಲ್ಲಿ ಬರುತ್ತಿದ್ದರು. ಹಳಿ ಮೇಲೆ ನೀರು ನಿಂತ ಕಾರಣ ಸುಮಾರು 2 ಗಂಟೆಗಳವರೆಗೆ ರೈಲು ನಿಂತೇ ಇತ್ತು. ಈ ವೇಳೆ ಇಬ್ಬರೂ ರೈಲಿನಿಂದ ಇಳಿದು ಎರಡೂವರೆ ಕೀ.ಮೀ ನಡೆದು ಹತ್ತಿರದ ಪೊಲೀಸ್ ಠಾಣೆಗೆ ತಲುಪಿದರು. ಸಚಿವ ಹಾಗೂ ಶಾಸಕ ಹಳಿಗಳ ಮೇಲೆ ನಡೆದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೇ ರೈಲಿನಲ್ಲಿ ಹಲವು ಶಾಸಕರೂ ಇದ್ದರು ಎನ್ನಲಾಗಿದೆ. * ಜಲಾವೃತಗೊಂಡ ಮುಂಬೈನ ತಗ್ಗು ಪ್ರದೇಶಗಳು * ಠಾಣೆ ಜಿಲ್ಲೆಯಲ್ಲಿ ಸೇತುವೆಯೊಂದು ಕೊಚ್ಚಿ ಹೋಗಿದೆ. ಇದರಿಂದ 275 ಮನೆಗಳಿಗೆ ಹಾನಿಯಾಗಿದ್ದು 54 ಜನರನ್ನು ರಕ್ಷಿಸಲಾಗಿದೆ * ಮುಂಬೈ ರತ್ನಗಿರಿ ಹಾಗೂ ಸಿಂಧುದುರ್ಗ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ * ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಮಳೆ ಪರಿಸ್ಥಿತಿ ಬಗ್ಗೆ ತಮ್ಮ ಕಾರ್ಯಾಲಯದಲ್ಲಿ ಸಭೆ ನಡೆಸಿದರು. ಬಿಎಂಸಿ ಕಚೇರಿಗೂ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದರು