ಕಾಸರಗೋಡು: ಜಿಲ್ಲಾದ್ಯಂತ ಬಿರುಸಿನ ಮಳೆ ಮುಂದುವರಿದಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರತ್ಯೇಕ ಜಾಗ್ರತಾ ನಿರ್ದೇಶ ಜಾರಿಗೊಳಿಸಿದೆ. ರಾಜ್ಯದಲ್ಲಿ ಮುಂದಿನ ಐದು ದಿವಸಗಳ ಕಾಲ ಬಿರುಸಿನ ಮಳೆಯಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದ್ದು, ಪ್ರತ್ಯೇಕವಾಗಿ ತಗ್ಗುಪ್ರದೇಶ ಹಾಗೂ ಮಲೆನಾಡು ಜನತೆ ಹೆಚ್ಚಿನ ಜಾಗ್ರತೆ ಪಾಲಿಸುವಂತೆ ಸೂಚಿಸಲಾಗಿದೆ.
ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜು. 19ರಿಂದ 21ರ ವರೆಗೆ ಆರೆಂಜ್, ಯೆಲ್ಲೋ ಅಲರ್ಟ್ ಜಾರಿಗೊಳಿಸಲಾಗಿದೆ.
ಬಿರುಸಿನ ಗಾಳಿಯಿಂದ ಕೂಡಿದ ಮಳೆಯಿಂದ ಕೇರಳದಲ್ಲಿ ಹೆಚ್ಚಿನ ಅನಾಹುತ ತಂದೊಡ್ಡುವ ಸಾಧ್ಯತೆಯಿದ್ದು, ಈ ಬಗ್ಗೆ ಜನತೆ ಜಾಗ್ರತೆ ಪಾಲಿಸಬೇಖು, ಬಿರುಸಿನ ಗಾಳಿಗೆ ಮರಗಳು ಉರುಳುವುದು, ಕೊಂಬೆಗಳು ಮುರಿದು ಬೀಳುವ ಸಾಧ್ಯತೆಯಿರುವುದರಿಂದ ಜನತೆ ಮರಗಳ ಕೆಳಗೆ ನಿಲ್ಲದಿರುವಂತೆ ಹಾಗೂ ಮರಗಳ ಕೆಳಗೆ ವಾಹನಗಳನ್ನು ನಿಲ್ಲಿಸದಿರುವಂತೆ ಸೂಚಿಸಲಾಗಿದೆ. ಮನೆಯ ಅಂಗಳದಲ್ಲಿರುವ ಮರಗಳ ಅಪಾಯಕಾರಿ ಕೊಂಬೆಗಳನ್ನು ತೆರವುಗೊಳಿಸುವುದರ ಜತೆಗೆ ಸಾರ್ವಜನಿಕ ಪ್ರದೇಶಗಳಲ್ಲಿನ ಶಿಥಿಲಗೊಂಡ ಮರಗಳ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿನೀಡಬೇಕು. ಅಸುರಕ್ಷಿತ ಜಾಹೀರಾತು ಫಲಕಗಳು, ವಿದ್ಯುತ್ ಕಂಬಗಳು, ಧ್ವಜಸ್ತಂಭಗಳು ಇತ್ಯಾದಿಗಳು ಗಾಳಿಗೆ ಬೀಳುವ ಸಾಧ್ಯತೆಯಿದ್ದು, ಸಾರ್ವಜನಿಕರು ಈ ಬಗ್ಗೆ ಜಾಗ್ರತೆ ಪಾಲಿಸಬೇಕು.
ದಿನಪತ್ರಿಕೆ ಮತ್ತು ಹಾಲು ವಿತರಿಸಲು ಬೆಳಿಗ್ಗೆ ಬೇಗನೆ ಕೆಲಸಕ್ಕೆ ತೆರಳುವವರು ಜಲಮೂಲಗಳಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಖು. ಯಾವುದೇ ಅಪಾಯ ಸೂಚಕಗಳು ಕಂಡುಬಂದರೆ, ನಿಯಂತ್ರಣ ಕೊಠಡಿಗೆ ಮಾಃಇತಿ ನೀಡುವಂತೆ ಸೂಚಿಸಲಾಗಿದೆ.
ಕಾಸರಗೋಡು ಅಶ್ವಿನಿನಗರದಲ್ಲಿ ವಿದ್ಯುತ್ ತಂತಿಗೆ ಮರವುರುಳಿ ಹಾನಿಸಂಭವಿಸಿದೆ.