ಕಾಸರಗೋಡು: ವಿಶ್ವ ಜನಸಂಖ್ಯಾ ದಿನಾಚರಣೆ ಜಿಲ್ಲಾ ಮಟ್ಟದ ಉದ್ಘಾಟನೆ ಮತ್ತು ಜಾಗೃತಿ ವಿಚಾರ ಸಂಕಿರಣ ಕಾಞಂಗಾಡ್ ರಾಷ್ಟ್ರೀಯ ಆರೋಗ್ಯ ಮಿಷನ್ ಸಮ್ಮೇಳನ ಸಭಾಂಗಣದಲ್ಲಿ ಜರುಗಿತು.
ಕಾಞಂಗಾಡ್ ನಗರಸಭಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ ಸರಸ್ವತೀ ಸಮಾರಂಭ ಉದ್ಘಾಟಿಸಿದರು. ಸಂಜೀವನಿ ನೋಡಲ್ ಅಧಿಕಾರಿ ಡಾ. ಸಚಿನ್ ಸೆಲ್ವಿನ್ ಅಧ್ಯಕ್ಷತೆ ವಹಿಸಿದ್ದರು. ಎಚ್‍ಡಬ್ಲ್ಯೂಸಿ ಜೂನಿಯರ್ ಕನ್ಸಲ್ಟೆಂಟ್ ಡಾ.ಧನ್ಯ ದಯಾನಂದ್, ಎಂಸಿಎಚ್ ಅಧಿಕಾರಿ ಎಂ.ಶೋಭನಾ ಉಪಸ್ಥಿತರಿದ್ದರು. ಜಿಲ್ಲಾ ವೈದ್ಯಕೀಯ ಕಚೇರಿಯ ತಾಂತ್ರಿಕ ಸಹಾಯಕ ಎಂ. ಚಂದ್ರನ್ ಸ್ವಾಗತಿಸಿದರು. ಜಿಲ್ಲಾ ಉಪ ಶಿಕ್ಷಣ ಮಾಧ್ಯಮ ಅಧಿಕಾರಿ ಎನ್.ಪಿ.ಪ್ರಶಾಂತ್ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ದೀಪಾ ಮಾಧವನ್ ಅವರು ಎಂಎಲ್‍ಎಸ್‍ಪಿ ಸಿಬ್ಬಂದಿಗಾಗಿ ಜಾಗೃತಿ ವಿಚಾರ ಸಂಕಿರಣ ನಡೆಸಿಕೊಟ್ಟರು. 'ಗರ್ಭಧಾರಣೆಯ ಸಮಯ ಮತ್ತು ಅಂತರವನ್ನು ಸೂಕ್ತ ಸಮಯಕ್ಕೆ ನಿಗದಿಪಡಿಸಬೇಕು' ಎಂಬುದು ಈ ವರ್ಷದ ಜನಸಂಖ್ಯಾ ದಿನಚರಣೆಯ ಸಂದೇಶವಾಗಿದ್ದು, ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ) ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದೆ. ಮೂರು ಹಂತಗಳಲ್ಲಾಗಿ ಈ ವರ್ಷದ ಕಾರ್ಯಚಟುವಟಿಕೆ ಆಯೋಜಿಸಲಾಗಿದ್ದು, ಜೂನ್ 1 ರಿಂದ 20 ರವರೆಗೆ ಪೂರ್ವಸಿದ್ಧತಾ ಹಂತ, ಜೂನ್ 27 ರಿಂದ ಜುಲೈ 10 ರವರೆಗೆ ಕಮ್ಯೂನಿಟಿ ಮೊಬಿಲೈಸೇಶನ್ ಫೋರ್ಟ್‍ನೈಟ್ ಮತ್ತು ಜುಲೈ 11 ರಿಂದ 24 ರವರೆಗೆ ಸರ್ವೀಸ್ ಮೊಬಿಲೈಸೇಶನ್ ಫೋರ್ಟ್‍ನೈಟ್ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ಆರೋಗ್ಯ ಸಂಸ್ಥೆಗಳಿಂದ ಸೇವಾ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ವಿ.ರಾಮದಾಸ್ ಮಾಹಿತಿ ನೀಡಿದರು.