HEALTH TIPS

ಹಳಿ ತಪ್ಪಿದ ಚಂಡೀಗಢ- ದಿಬ್ರುಗಢ ಎಕ್ಸ್‌ಪ್ರೆಸ್‌ ಪ್ರಯಾಣಿಕ ರೈಲು: ಇಬ್ಬರು ಸಾವು

            ಗೊಂಡಾ/ನವದೆಹಲಿ/ಲಖನೌ: ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಚಂಡೀಗಢ-ದಿಬ್ರೂಗಢ ಎಕ್ಸ್‌ಪ್ರೆಸ್‌ ರೈಲು ಗುರುವಾರ ಹಳಿ ತಪ್ಪಿದ ಪರಿಣಾಮ ಇಬ್ಬರು ಮೃತಪಟ್ಟು, ಇತರ 28 ಮಂದಿ ಗಾಯಗೊಂಡಿದ್ದಾರೆ.

            ಗಾಯಾಳುಗಳ ಪೈಕಿ ಆರು ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಗೊಂಡಾ-ಗೋರಖಪುರ ಸೆಕ್ಷನ್‌ನ ಝಿಲಾಯಿ ರೈಲು ನಿಲ್ದಾಣ ಸಮೀಪ ಮಧ್ಯಾಹ್ನ 3ರ ವೇಳೆಗೆ ಈ ಅಪಘಾತ ಸಂಭವಿಸಿದೆ.

           ಎ.ಸಿ ಕೋಚ್‌ಗಳು ಸೇರಿದಂತೆ 12 ಕೋಚ್‌ಗಳು ಹಳಿ ತಪ್ಪಿದ್ದು, ಗಾಯಾಳುಗಳನ್ನು ಗೊಂಡಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗೊಂಡಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿನೀತ್‌ ಜೈಸ್ವಾಲ್‌ ಹೇಳಿದ್ದಾರೆ.

               ರಕ್ಷಣಾ ಕಾರ್ಯಕ್ಕಾಗಿ ವೈದ್ಯರ ತಂಡ, ಆಂಬುಲೆನ್ಸ್‌ಗಳು, ಪರಿಹಾರ ಕಾರ್ಯಕ್ಕೆ ನೆರವಾಗುವ ರೈಲನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿತ್ತು. ರಕ್ಷಣಾ ಕಾರ್ಯಕ್ಕೆ ಗ್ರಾಮಸ್ಥರು ಕೈಜೋಡಿಸಿದ್ದು, ಎಸ್‌ಡಿಆರ್‌ಎಫ್‌ನ ತಂಡವೊಂದನ್ನು ಕೂಡ ಘಟನಾ ಸ್ಥಳಕ್ಕೆ ಕಳುಹಿಸಲಾಗಿತ್ತು.

ರೈಲು, ಚಂಡೀಗಢ ನಿಲ್ದಾಣದಿಂದ ಬುಧವಾರ ರಾತ್ರಿ 11.40ಕ್ಕೆ ನಿರ್ಗಮಿಸಿತ್ತು. ರೈಲಿನ ಬೋಗಿಗಳು ಹಳಿ ತಪ್ಪಿದ ನಂತರ ಕೆಲ ಪ್ರಯಾಣಿಕರು ತಮ್ಮ ಲಗೇಜುಗಳೊಂದಿಗೆ ಹಳಿಗಳ ಉದ್ದಕ್ಕೂ ನಡೆದು ಸಾಗುತ್ತಿದ್ದ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಪ್ರಯಾಣಿಕರು, ಹಳಿ ತಪ್ಪಿದ ಕೋಚ್‌ಗಳಿಂದ ಹೊರಬರಲು ಯತ್ನಿಸುತ್ತಿದ್ದ ದೃಶ್ಯಗಳೂ ವಿಡಿಯೊದಲ್ಲಿವೆ.

               'ಕೋಚ್‌ಗಳಲ್ಲಿ ಹಲವು ಪ್ರಯಾಣಿಕರು ಸಿಲುಕಿದ್ದರು. ಹಳಿ ತಪ್ಪಿದ ನಂತರ ಕನಿಷ್ಠ ನಾಲ್ಕು ಕೋಚ್‌ಗಳು ಉರುಳಿ ಬಿದ್ದವು' ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

           ಅಪಘಾತ ಕುರಿತು ಮಾಹಿತಿ ಪಡೆದಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಗಾಯಾಳುಗಳಿಗೆ ಸಮರ್ಪಕ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

           ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ ಸಿಂಗ್‌ ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ಕಾರ್ಯ ಕುರಿತು ಮಾಹಿತಿ ಪಡೆದರು.

             ಪ್ರಯಾಣಿಕರ ಅನುಕೂಲಕ್ಕಾಗಿ ಅಯೋಧ್ಯೆಯಿಂದ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿತ್ತು ಎಂದು ಸಚಿವ ಸಿಂಗ್‌ ಹೇಳಿದ್ದಾರೆ.


ಅಪಘಾತ: ಪ್ರಮುಖ ಅಂಶಗಳು

  • ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ತಲಾ ₹2.5 ಲಕ್ಷ ಪರಿಹಾರವನ್ನು ರೈಲ್ವೆ ಘೋಷಿಸಿದೆ.

  • ಎ.ಸಿ ಕೋಚ್‌ಗಳಲ್ಲಿ ಪ್ರಯಾಣಿಸುತ್ತಿದ್ದವರೇ ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ

  • ಗ್ಯಾಸ್‌ ಕಟರ್‌ ಬಳಸಿ, ಹಳಿ ತಪ್ಪಿದ ಕೋಚ್‌ಗಳಲ್ಲಿ ಸಿಲುಕಿದ್ದವರನ್ನು ಹೊರಕ್ಕೆ ತರಲಾಯಿತು

  • ಹತ್ತಿರದ ಊರುಗಳಿಗೆ ತೆರಳಬೇಕಿದ್ದ ಪ್ರಯಾಣಿಕರಿಗೆ ರೈಲ್ವೆ ಬಸ್‌ಗಳ ವ್ಯವಸ್ಥೆ ಮಾಡಿತ್ತು

  • 10ಕ್ಕೂ ಅಧಿಕ ರೈಲುಗಳ ಮಾರ್ಗ ಬದಲಾಯಿಸಲಾಗಿತ್ತು.

ಉನ್ನತ ಮಟ್ಟದ ತನಿಖೆಗೆ ಆದೇಶ

ಚಂಡೀಗಢ-ದಿಬ್ರೂಗಢ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿದ ಘಟನೆ ಕುರಿತು ರೈಲ್ವೆಯು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. 'ಕೋಚ್‌ಗಳು ಹಳಿ ತಪ್ಪುವುದಕ್ಕೂ ಮೊದಲು ಜೋರಾದ ಶಬ್ದ ಕೇಳಿತು ಎಂದು ಲೋಕೊ ಪೈಲಟ್‌ಗಳು ತಿಳಿಸಿದ್ದಾರೆ. ತನಿಖೆ ನಂತರ ಅವಘಡಕ್ಕೆ ಕಾರಣ ಗೊತ್ತಾಗಲಿದೆ' ಎಂದು ಈಶಾನ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪಂಕಜಕುಮಾರ್‌ ಹೇಳಿದ್ದಾರೆ.

ಕೋಚ್‌ ಆವರಿಸಿದ್ದ ದೂಳು... ಮಕ್ಕಳ ಚೀರಾಟ

'ನಾನು ಪ್ರಯಾಣಿಸುತ್ತಿದ್ದ ಕೋಚ್‌ನಲ್ಲಿ ದೂಳು ಆವರಿಸಿತ್ತು. ಮತ್ತೊಂದೆಡೆ ಹತ್ತಿರದ ಸೀಟಿನಲ್ಲಿ ಕುಳಿತಿದ್ದ ಬಾಲಕನೊಬ್ಬ ಜೋರಾಗಿ ಚೀರಲು ಆರಂಭಿಸಿದ್ದ. ಕೆಲ ಕ್ಷಣ ಏನಾಗುತ್ತಿದೆ ಎಂಬುದೇ ನನಗೆ ಗೊತ್ತಾಲಿಲ್ಲ. ಕೆಲ ಪ್ರಯಾಣಿಕರು ನನ್ನ ಕೈಹಿಡಿದು ಎಳೆದು ಕಿಟಕಿ ಮೂಲಕ ಹೊರಗೆ ಬರಲು ನೆರವಾದರು...' ಚಂಡೀಗಢ-ದಿಬ್ರೂಗಢ ಎಕ್ಸ್‌ಪ್ರೆಸ್‌ ರೈಲಿನ 12 ಕೋಚ್‌ಗಳು ಹಳಿ ತಪ್ಪಿ ಸಂಭವಿಸಿದ ಅಪಘಾತ ಕುರಿತು ಸಂದೀಪ್‌ ಕುಮಾರ್‌ ಎಂಬ ಪ್ರಯಾಣಿಕರೊಬ್ಬರು ಹೇಳಿದ ಮಾತುಗಳಿವು. 'ಕಿಟಕಿ ಪಕ್ಕ ಕುಳಿತಿದ್ದೆ. ಜೋರಾದ ಶಬ್ದ ಕೇಳಿಸಿತು. ಅದರ ಬೆನ್ನಲ್ಲೇ ನೂಕಿದ ಅನುಭವವಾಯಿತು. ಅದರ ರಭಸಕ್ಕೆ ನಾನು ಕೋಚ್‌ನ ಚಾವಣಿಯತ್ತ ಎಸೆಯಲ್ಪಟ್ಟೆ' ಎಂದು ಮತ್ತೊಬ್ಬ ಪ್ರಯಾಣಿಕ ಮನೀಷ್‌ ತಿವಾರಿ ಆ ಭಯಾನಕ ಕ್ಷಣಗಳನ್ನು ವಿವರಿಸಿದರು. ಈ ಅವಘಡದಲ್ಲಿ ಪಾರಾದ ಬಹುತೇಕ ಪ್ರಯಾಣಿಕರು ತಾವು ಎದುರಿಸಿದ ಆತಂಕ-ದುಗುಡವನ್ನು ವಿವರಿಸಿದ್ದಾರೆ.

ಪ್ರಧಾನಿ ರೈಲ್ವೆ ಸಚಿವ ಹೊಣೆ ಹೊರಲಿ: ಕಾಂಗ್ರೆಸ್

ಚಂಡೀಗಢ-ದಿಬ್ರೂಗಢ ಎಕ್ಸ್‌ಪ್ರೆಸ್‌ ರೈಲಿನ ಕೆಲ ಕೋಚ್‌ಗಳು ಹಳಿ ತಪ್ಪಿ ಸಂಭವಿಸಿದ ಅವಘಡಕ್ಕೆ ಸಂಬಂಧಪಟ್ಟ ಲೋಪದ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿವೈಷ್ಣವ್‌ ಹೊತ್ತುಕೊಳ್ಳಬೇಕು ಎಂದು ಕಾಂಗ್ರೆಸ್‌ ಗುರುವಾರ ಆಗ್ರಹಿಸಿದೆ. 'ಡಿಕ್ಕಿ ನಿರೋಧಕ ವ್ಯವಸ್ಥೆ 'ಕವಚ್' ಅನ್ನು ದೇಶದ ಎಲ್ಲ ರೈಲು ಮಾರ್ಗಗಳಲ್ಲಿ ತ್ವರಿತವಾಗಿ ಅಳವಡಿಸಬೇಕು' ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ. 'ಮೋದಿ ನೇತೃತ್ವದ ಸರ್ಕಾರ ರೈಲ್ವೆ ಸುರಕ್ಷತೆಯನ್ನು ವ್ಯವಸ್ಥಿತವಾಗಿ ಹೇಗೆ ಅಪಾಯಕ್ಕೆ ನೂಕಿದೆ ಎಂಬುದಕ್ಕೆ ಚಂಡೀಗಢ-ದಿಬ್ರೂಗಢ ಎಕ್ಸ್‌ಪ್ರೆಸ್‌ ಹಳಿ ತಪ್ಪಿರುವುದೇ ಸಾಕ್ಷಿ' ಎಂದು ಟೀಕಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries