ಉಪ್ಪಳ: ಉಪ್ಪಳ ಸನಿಹದ ಜೋಡುಕಲ್ಲಿನಲ್ಲಿ ಚಟುವಟಿಕೆ ನಡೆಸುತ್ತಿರುವ ಸೇವಾ ಭಾರತಿಯ ಕೇಶವ ಶಿಶುಮಂದಿರದ ಸೇವಾ ನಿಧಿ ಕಾಣಿಕೆ ಹುಂಡಿ ಹಾಡಹಗಲು ಕಳವುಗೈದು, ಹುಂಡಿ ಬೀಗ ಒಡೆಯಲು ವಿಫಲಯತ್ನ ನಡೆಸಲಾಗಿದೆ. ಕಾಣಿಕೆಹುಂಡಿಯನ್ನು ಶಿಶುಮಂದಿರದ ಸನಿಹದ ಮನೆಯೊಂದರ ವರಾಂಡದಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸೋಮವಾರ ಮಧ್ಯಾಹ್ನ 2ರಿಂದ ಸಂಜೆ 5ರ ಕಾಲಾವಧಿಯೊಳಗೆ ಹುಂಡಿ ಕಳವು ನಡೆದಿದೆ. ಈ ಬಗ್ಗೆ ಸನಿಹದ ಮನೆಯವರು ಶಿಶುಮಂದಿರ ಸಮಿತಿ ಪದಾಧಿಕಾರಿಗಳಿಗೆ ನೀಡಿದ ಮಾಹಿತಿಯನ್ವಯ ಸ್ಥಳಕ್ಕಾಗಮಿಸಿ ನೋಡಿದಾಗ ಶಿಶುಮಂದಿರದ ಎದುರಿನ ಬಾಗಿಲ ಬೀಗ ಒಡೆದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಕಾಣಿಕೆ ಹುಂಡಿಯ ಬೀಗ ಒಡೆಯಲು ಸಾಧ್ಯವಾಗದೆ, ಮನೆ ಜಗಲಿಯಲ್ಲಿ ಎಸೆದು ಪರಾರಿಯಾಗಿರಬೇಕೆಂದು ಸಂಶಯಿಸಲಾಗಿದೆ. ಶೀಶು ಮಂದಿರ ಸಮಿತಿ ಕಾರ್ಯದರ್ಶಿ ಲೋಕೇಶ್ ನೋಂಡ ನೀಡಿದ ದೂರಿನನ್ವಯ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಾಣಿಕೆ ಹುಂಡಿಯಿಂದ ಹಣ ನಷ್ಟಗೊಮಡಿಲ್ಲ. ಕಾಣಿಕೆ ಹುಂಡಿ ಹಣವನ್ನು ಚೌತಿ ಸಂದರ್ಭ ಸಂಗ್ರಹಿಸಲು ತೀರ್ಮಾನಿಸಲಾಗಿತ್ತು ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.