ಹಾಥರಸ್ :: ಹಾಥರಸ್ ಕಾಲ್ತುಳಿತ ಪ್ರಕರಣದ ಪ್ರಮುಖ ಆರೋಪಿ ದೇವಪ್ರಕಾಶ ಮಧುಕರ್‌ನನ್ನು ಪತ್ತೆಹಚ್ಚಲು ಉತ್ತರ ಪ್ರದೇಶ ಸರ್ಕಾರಿ ಏಜೆನ್ಸಿಗಳು ರಾಜ್ಯದಾದ್ಯಂತ ಮತ್ತು ನೆರೆಯ ರಾಜಸ್ಥಾನ ಮತ್ತು ಹರಿಯಾಣದಲ್ಲಿ ತೀವ್ರ ಶೋಧ ನಡೆಸಿವೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.
ಈ ಪ್ರಕರಣದಲ್ಲಿ ವಿಚಾರಣೆಗಾಗಿ ಪೊಲೀಸರು ಸೇರಿದಂತೆ ಏಜೆನ್ಸಿಗಳು ನಾರಾಯಣ ಸಾಕಾರ ವಿಶ್ವಹರಿ ಬಾಬಾ (ಭೋಲೆ ಬಾಬಾ) ಅವರನ್ನೂ ಹುಡುಕುತ್ತಿದ್ದಾರೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಜುಲೈ 2ರಂದು ಹಾಥರಸ್‌ನ ಫೂಲರಾಯ್ ಗ್ರಾಮದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಒಟ್ಟು 121 ಜನರು ಸಾವಿಗೀಡಾಗಿದ್ದರು. ಇವರಲ್ಲಿ ಹೆಚ್ಚಿನವರು ಮಹಿಳೆಯರು.
ಎಫ್‌ಐಆರ್‌ನಲ್ಲಿ 'ಮುಖ್ಯ ಸೇವಾದಾರ' (ಸತ್ಸಂಗದ ಮುಖ್ಯ ಸಂಘಟಕ) ಮಧುಕರ್‌ನನ್ನು ಮಾತ್ರ ಆರೋಪಿಯನ್ನಾಗಿ ಮಾಡಲಾಗಿದೆ. ಆದರೆ ಭೋಲೆ ಬಾಬಾ ಅವರನ್ನು ಆರೋಪಿ ಎಂದು ಉಲ್ಲೇಖಿಸಲಾಗಿಲ್ಲ. ಮಧುಕರ್ ಅಲ್ಲದೆ, ಹಲವಾರು ಅಪರಿಚಿತ ಸಂಘಟಕರ ವಿರುದ್ಧವೂ ಸಿಕಂದರಾ ರಾವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
6 'ಸೇವಾದಾರ'ರ ಬಂಧನ:
ಪ್ರಕರಣ ಸಂಬಂಧ ಇದುವರೆಗೆ ಇಬ್ಬರು ಮಹಿಳೆಯರು ಸೇರಿದಂತೆ 6 ಮಂದಿ 'ಸೇವಾದಾರ'ರನ್ನು ಉತ್ತರ ಪ್ರದೇಶ ಪೊಲೀಸರು ಗುರುವಾರ ಬಂಧಿಸಿದ್ದಾರೆ. ರಾಮ್ ಲಡೈತೆ(50), ಉಪೇಂದ್ರ ಸಿಂಗ್ ಯಾದವ್(62), ಮೇಘ್ ಸಿಂಗ್(61), ಮುಕೇಶ್ ಕುಮಾರ್(38) ಮಹಿಳೆಯರಾದ ಮಂಜು ಯಾದವ್(30) ಹಾಗೂ ಮಂಜು ದೇವಿ(40) ಬಂಧಿತರು.
ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮುಖ್ಯ 'ಸೇವಾದಾರ' ಹಾಗೂ ಪ್ರಕರಣದ ಪ್ರಮುಖ ಆರೋಪಿ ದೇವಪ್ರಕಾಶ ಮಧುಕರ್ ಕುರಿತು ಸುಳಿವು ನೀಡಿದವರಿಗೆ ₹ 1 ಲಕ್ಷ ಬಹುಮಾನ ಘೋಷಿಸಲಾಗಿದೆ.
ಘಟನೆಯ ಪ್ರಮುಖಾಂಶಗಳು