ಆರೋಪಿಯು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಬಣದ ನಾಯಕ ರಾಜೇಶ್ ಶಾ ಅವರ ಪುತ್ರ ಮಿಹಿರ್ ಶಾ ಎನ್ನಲಾಗಿದೆ. ರಾಜೇಶ್ ಅವರು ಶಿವಸೇನಾದ ಪಾಲ್ಗರ್ ಜಿಲ್ಲಾ ಘಟಕದ ಉಪಾಧ್ಯಕ್ಷ.
ಘಟನೆಯ ಹಿನ್ನೆಲೆ:
ವರ್ಲಿ ಕೋಳಿವಾಡ ನಿವಾಸಿ ಕಾವೇರಿ ನಖವಾ (45) ಅವರು ತಮ್ಮ ಪತಿ ಪ್ರದೀಕ್ ನಖವಾ (50) ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಅನ್ನಿ ಬೆಸೆಂಟ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಮಿಹಿರ್ ಶಾ ಚಲಾಯಿಸುತ್ತಿದ್ದ ಐಷಾರಾಮಿ ಡಿಕ್ಕಿ ಹೊಡೆದಿತ್ತು. ಭಾನುವಾರ ಬೆಳಿಗ್ಗೆ 5.30ರ ಸುಮಾರಿಗೆ ಅಪಘಾತ ಸಂಭವಿಸಿತ್ತು.
ಡಿಕ್ಕಿಯ ರಭಸಕ್ಕೆ ಕಾರು, ಮಹಿಳೆಯನ್ನು ಸುಮಾರು 2 ಕಿಮೀಗೂ ಹೆಚ್ಚು ದೂರದವರೆಗೆ ಎಳೆದೊಯ್ದಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯಲ್ಲಿ ಕಾವೇರಿ ನಖವಾ ಮೃತಪಟ್ಟು, ಅವರ ಪತಿ ಪ್ರದೀಕ್ ನಖವಾ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ಈ ಘಟನೆಯು ಮಹಾರಾಷ್ಟ್ರದಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಮದ್ಯ ಕುಡಿದು ಕಾರು ಚಾಲನೆ ಮಾಡಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಇಂತಹದೇ ಘಟನೆಗಳು ಈ ಹಿಂದೆ ಪುಣೆ ಮತ್ತು ನಾಗ್ಪುರದಲ್ಲಿ ನಡೆದಿದ್ದವು.
ಇಬ್ಬರ ಬಂಧನ:
ಅಪಘಾತದ ನಂತರ ಮಿಹಿರ್ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಮಿಹಿರ್ ತಂದೆ ರಾಜೇಶ್ ಶಾ ಮತ್ತು ಅವರ ಚಾಲಕ ರಾಜೇಂದ್ರ ಸಿಂಗ್ ಬಿಡಾವತ್ ಅವರನ್ನು ಭಾನುವಾರ ವರ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. 'ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ' ಎಂದು ಡಿಸಿಪಿ ಕೃಷ್ಣಕಾಂತ್ ಉಪಾಧ್ಯಾಯ ತಿಳಿಸಿದ್ದಾರೆ.
'ಜುಹುವಿನ ಬಾರ್‌ವೊಂದರಲ್ಲಿ ಗೆಳೆಯರ ಜತೆ ಮದ್ಯ ಕುಡಿದಿದ್ದ ಮಿಹಿರ್ ಅವರು ಕಾರಿನಲ್ಲಿ ಮನೆಯತ್ತ ಹೊರಟಿದ್ದರು. ತಾನೇ ಚಾಲನೆ ಮಾಡುತ್ತೇನೆ ಎಂದು ಮಿಹಿರ್ ಅವರು ಚಾಲಕನಿಗೆ ಹೇಳಿ ಕಾರು ಚಲಾಯಿಸಿದ್ದಾರೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕಾರು ರಾಜೇಶ್ ಶಾ ಅವರ ಒಡೆತನದಲ್ಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮಿಹಿರ್ ಶಾ ದೇಶದಿಂದ ಪಲಾಯನ ಮಾಡುವ ಸಾಧ್ಯತೆ ಇರುವುದರಿಂದ, ಮುಂಬೈ ಪೊಲೀಸರು ಭಾನುವಾರ ಸಂಜೆ ಆತನ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿ ಪತ್ತೆಗಾಗಿ 6 ತಂಡ ರಚನೆ
ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದು, ಆತನ ಪತ್ತೆಗೆ ಆರು ತಂಡಗಳನ್ನು ರಚಿಸಲಾಗಿದೆ. ಘಟನೆಗೆ ಕೆಲವು ಗಂಟೆಗಳ ಮೊದಲು ಇಲ್ಲಿನ ಜುಹು ಪ್ರದೇಶದ ಬಾರ್‌ನಲ್ಲಿ ಮಿಹಿರ್ ಕಾಣಿಸಿಕೊಂಡಿದ್ದರಿಂದ ಅಪಘಾತದ ಸಮಯದಲ್ಲಿ ಮಿಹಿರ್ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅಲ್ಲದೇ ಆರೋಪಿ ಬಾರ್‌ನಲ್ಲಿ ಪಾವತಿಸಿದ ₹ 18,000 ಬಿಲ್ ಅನ್ನು ಸಹ ಪತ್ತೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದ್ದು, ಬಾರ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.