ನವದೆಹಲಿ: ಎನ್‌ಡಿಎ ಮಿತ್ರಪಕ್ಷಗಳ ಆಡಳಿತವಿರುವ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಬಜೆಟ್‌ನಲ್ಲಿ ಹೆಚ್ಚು ನೀಡಿ ಇತರ ರಾಜ್ಯಗಳನ್ನು ನಿರ್ಲಕ್ಷಿಸಲಾಗಿದೆ ಎಂಬ ವಿರೋಧ ಪಕ್ಷಗಳ ಟೀಕೆಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಗಳವಾರ ತಿರುಗೇಟು ನೀಡಿದ್ದಾರೆ.
ನವದೆಹಲಿ: ಎನ್‌ಡಿಎ ಮಿತ್ರಪಕ್ಷಗಳ ಆಡಳಿತವಿರುವ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಬಜೆಟ್‌ನಲ್ಲಿ ಹೆಚ್ಚು ನೀಡಿ ಇತರ ರಾಜ್ಯಗಳನ್ನು ನಿರ್ಲಕ್ಷಿಸಲಾಗಿದೆ ಎಂಬ ವಿರೋಧ ಪಕ್ಷಗಳ ಟೀಕೆಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಗಳವಾರ ತಿರುಗೇಟು ನೀಡಿದ್ದಾರೆ.
ಯುಪಿಎ ಆಡಳಿತದ ಅವಧಿಯಲ್ಲಿ ಮಂಡಿಸಲಾದ ಬಜೆಟ್‌ಗಳನ್ನು ಉಲ್ಲೇಖಿಸಿದ ಅವರು, ಹಲವು ರಾಜ್ಯಗಳ ಹೆಸರುಗಳ ಪ್ರಸ್ತಾಪವೇ ಇರಲಿಲ್ಲ ಎಂದು ಹೇಳಿದರು.
ಬಜೆಟ್ ಮೇಲಿನ ಚರ್ಚೆ ವೇಳೆ, '2004-05ನೇ ಸಾಲಿನ ಬಜೆಟ್ ಭಾಷಣದಲ್ಲಿ 17 ರಾಜ್ಯಗಳ ಹೆಸರುಗಳು ಇರಲಿಲ್ಲ. ಈ ರಾಜ್ಯಗಳಿಗೆ ಹಣ ಬಿಡುಗಡೆಯಾಗಿರಲಿಲ್ಲವೇ?' ಎಂದರು.
'2006-07ನೇ ಸಾಲಿನ ಬಜೆಟ್ ಭಾಷಣದಲ್ಲಿ 18, 2007-08ನೇ ಸಾಲಿನಲ್ಲಿ 16 ಹಾಗೂ 2009-10ನೇ ಸಾಲಿನಲ್ಲಿ 26 ರಾಜ್ಯಗಳ ಹೆಸರು ಉಲ್ಲೇಖಿಸಿರಲಿಲ್ಲ. 2009-10ನೇ ಸಾಲಿನ ಪೂರ್ಣ ಬಜೆಟ್‌ನ ಭಾಷಣದಲ್ಲಿ 20 ರಾಜ್ಯಗಳ ಹೆಸರು ಇರಲಿಲ್ಲ' ಎಂದು ತಿರುಗೇಟು ನೀಡಿದರು.
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ, ಆಂಧ್ರಪ್ರದೇಶ ನೂತನ ರಾಜಧಾನಿ ಅಮರಾವತಿ ಅಭಿವೃದ್ಧಿಗೆ ₹15 ಸಾವಿರ ಕೋಟಿ ಹಂಚಿಕೆ ಮಾಡಲಾಗಿದೆ. ರಸ್ತೆಗಳ ನಿರ್ಮಾಣಕ್ಕೆ ಬಿಹಾರಕ್ಕೆ ₹26 ಸಾವಿರ ಕೋಟಿ ತೆಗೆದಿರಿಸಿರುವುದನ್ನು ಪ್ರಸ್ತಾಪಿಸಿದ್ದ ವಿರೋಧ ಪಕ್ಷಗಳು, ಬಜೆಟ್ ಭಾಷಣದಲ್ಲಿ ಮಹಾರಾಷ್ಟ್ರ, ಅಸ್ಸಾಂ ರಾಜ್ಯಗಳ ಉಲ್ಲೇಖವೇ ಇಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು.
'ರೈತರ ವಿಚಾರವಾಗಿ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ. ಎಂ.ಎಸ್.ಸ್ವಾಮಿನಾಥನ್ ನೇತೃತ್ವದ ರೈತರ ಕುರಿತ ರಾಷ್ಟ್ರೀಯ ಆಯೋಗವು ಕೃಷಿ ಉತ್ಪನ್ನಗಳ ಎಂಎಸ್‌ಪಿಗೆ ಸಂಬಂಧಿಸಿ 2006ರಲ್ಲಿ ಮಾಡಿದ್ದ ಶಿಫಾರಸನ್ನು ಯುಪಿಎ ಸರ್ಕಾರ ಒಪ್ಪಿರಲಿಲ್ಲ' ಎಂದ ಸಚಿವೆ ನಿರ್ಮಲಾ ಸೀತಾರಾಮನ್, 'ರೈತರ ವಿಷಯದಲ್ಲಿ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುತ್ತಿದೆ' ಎಂದು ಕುಟುಕಿದರು.
ಕೇಂದ್ರ ಸರ್ಕಾರ ಪರಿಶಿಷ್ಟರು ಮತ್ತು ಒಬಿಸಿಗಳನ್ನು ನಿರ್ಲಕ್ಷಿಸುತ್ತಿದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ನೀಡಿದ ಅವರು, 'ಒಬಿಸಿಗೆ ಸೇರಿದ ಸಾಮಾನ್ಯ ಚಹಾ ಮಾರುವ ವ್ಯಕ್ತಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಆದರೆ, ಇದು 'ಇಂಡಿಯಾ' ಒಕ್ಕೂಟಕ್ಕೆ ಸಮಸ್ಯೆಯಾಗಿದೆ' ಎಂದರು.