ತಿರುವನಂತಪುರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರು ಗುಡ್ಡ ಕುಸಿತದ ಅವಘಡದಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಲಾರಿ ಚಾಲಕನನ್ನು ಪತ್ತೆ ಮಾಡಿಸುವಂತೆ ಕೋರಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಶಿರೂರಿನಲ್ಲಿ ನಾಪತ್ತೆಯಾದವರ ಪತ್ತೆ ಮಾಡುವ ಮತ್ತು ರಕ್ಷಿಸುವ ಕಾರ್ಯ ಕೈಗೊಂಡಿದ್ದಕ್ಕೆ ಕರ್ನಾಟಕ ಸರ್ಕಾರವನ್ನು ಶ್ಲಾಘಿಸಿದ ವಿಜಯನ್, 'ಸ್ಥಳದಲ್ಲಿ ಶೋಧ ಕಾರ್ಯವನ್ನು ನಿಲ್ಲಿಸಲಾಗಿದೆ ಎಂದು ಹಲವು ವರದಿಗಳು ಹೇಳುತ್ತಿವೆ. ಆದರೆ ಕೊನೆಯವರೆಗೂ ಅಗತ್ಯವಿರುವ ಎಲ್ಲಾ ಸಾಧನಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲು ನಿರ್ದೇಶನ ನೀಡುವಂತೆ ನಾನು ನಿಮ್ಮನ್ನು ಮನಃಪೂರ್ವಕವಾಗಿ ಕೇಳಿಕೊಳ್ಳುತ್ತೇನೆ' ಎಂದು ಎಕ್ಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಟ್ಯಾಗ್ ಮಾಡಿ ಪತ್ರದ ರೂಪದಲ್ಲಿ ಬರೆದುಕೊಂಡಿದ್ದಾರೆ.
ಜುಲೈ 16ರಂದು ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿತ ಸಂಭವಿಸಿದ್ದ ವೇಳೆ ಕೇರಳದ ಕೊಯಿಕ್ಕೋಡ್ ಮೂಲದ ಲಾರಿ ಚಾಲಕ ಅರ್ಜುನ್ ಮರದ ದಿಮ್ಮಿ ಹೊತ್ತ ಲಾರಿಯಲ್ಲಿ ಅದೇ ದಾರಿಯಲ್ಲಿ ಸಾಗುತ್ತಿದ್ದರು. ಕಳೆದ 12 ದಿನಗಳಿಂದ ಅವರು ನಾಪತ್ತೆಯಾಗಿದ್ದಾರೆ. ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಅವರನ್ನು ಹುಡುಕಲು ಹಲವು ಏಜೆನ್ಸಿಗಳು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿವೆ.