ನವದೆಹಲಿ: ಹೊಸ ಮೂರು ಕ್ರಿಮಿನಲ್ ಅಪರಾಧ ಕಾನೂನುಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾದ ಎಲ್ಲ ಪ್ರಕರಣಗಳಲ್ಲಿ ಮೂರು ವರ್ಷಗಳ ಒಳಗಾಗಿ ನ್ಯಾಯ ದೊರೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದರು.
ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ತರುವ ನಿಟ್ಟಿನಲ್ಲಿ ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಕಾಯ್ದೆಗಳು ಜುಲೈ 1ರಿಂದ ಜಾರಿಗೆ ಬಂದಿವೆ.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾ, ಹೊಸ ಕಾನೂನುಗಳ ಅಡಿಯಲ್ಲಿ ಶೇ90 ರಷ್ಟು ಪ್ರಕರಣಗಳಲ್ಲೂ ಅಪರಾಧಿಗಳು ಶಿಕ್ಷೆಗೊಳಗಾಗುವ ಸಾಧ್ಯತೆಯಿದೆ. ಆದ್ದರಿಂದ ಭವಿಷ್ಯದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಬಹುದು ಎಂದು ಭರವಸೆ ವ್ಯಕ್ತಪಡಿಸಿದರು.
'ಸುಪ್ರೀಂ ಕೋರ್ಟ್‌ವರೆಗೆ ಹೋದ ಪ್ರಕರಣಗಳಲ್ಲೂ ಎಫ್‌ಐಆರ್ ದಾಖಲಾದ ಮೂರು ವರ್ಷಗಳ ಒಳಗಾಗಿ ನ್ಯಾಯ ಲಭಿಸಲಿದೆ' ಎಂದು ತಿಳಿಸಿದರು.
ಚರ್ಚೆಗೆ ಸಿದ್ಧ: 'ಹೊಸ ಮೂರು ಕ್ರಿಮಿನಲ್ ಅಪರಾಧ ಕಾನೂನುಗಳಿಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಸಂಸದರಿಗೆ ಯಾವುದೇ ದೂರುಗಳಿದ್ದರೆ ನನ್ನನ್ನು ಭೇಟಿಯಾಗಿ ಚರ್ಚಿಸಬಹುದು. ಅವರ ಸಲಹೆಗಳನ್ನು ಆಲಿಸಲು ಸಿದ್ಧನಿದ್ದೇನೆ' ಎಂದರು.
'ಈ ಸಂಬಂಧ ನನ್ನನ್ನು ಯಾರು ಬೇಕಾದರೂ ಭೇಟಿಯಾಗಬಹುದು. ಜತೆಗೆ ಕುಳಿತು ಚರ್ಚಿಸೋಣ. ಆದರೆ ದಯವಿಟ್ಟು ಈ ವಿಷಯವನ್ನು ರಾಜಕೀಯಗೊಳಿಸಬೇಡಿ' ಎಂದು ಮನವಿ ಮಾಡಿದರು.
ಅಮಿತ್ ಶಾ, ಗೃಹ ಸಚಿವಹೊಸ ಕಾನೂನುಗಳ ಅನುಷ್ಠಾನದೊಂದಿಗೆ ಭಾರತವು ವಿಶ್ವದಲ್ಲೇ ಅತ್ಯಂತ ಆಧುನಿಕ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಹೊಂದಿದ ದೇಶ ಎನಿಸಿಕೊಂಡಿದೆ.ಹೊಸ ಮೂರು ಕಾನೂನುಗಳು ಬ್ರಿಟಿಷ್ ಕಾಲದಲ್ಲಿ ರೂಪುಗೊಂಡ ಭಾರತೀಯ ದಂಡ ಸಂಹಿತೆ, ಅಪರಾಧ ದಂಡಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಜಾರಿಗೆ ಬಂದಿವೆ.
'ನ್ಯಾಯವನ್ನು ಬುಲ್ಡೋಜ್ ಮಾಡಲು ಬಿಡೆವು'
ಮೂರು ಹೊಸ ಕಾನೂನುಗಳನ್ನು ಸಂಸತ್ತಿನಲ್ಲಿ 'ಬಲವಂತವಾಗಿ' ಅಂಗೀಕರಿಸಲಾಗಿದೆ ಎಂದು ಆರೋಪಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 'ಸಂಸದೀಯ ವ್ಯವಸ್ಥೆಯಲ್ಲಿ ನ್ಯಾಯವನ್ನು 'ಬುಲ್ಡೋಜ್' ಮಾಡಲು ಇಂಡಿಯಾ ಮೈತ್ರಿಕೂಟ ಅವಕಾಶ ನೀಡದು' ಎಂದಿದ್ದಾರೆ. 'ಚುನಾವಣೆಯಲ್ಲಿ ಹಿನ್ನಡೆ ಎದುರಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯವರು ಸಂವಿಧಾನವನ್ನು ಗೌರವಿಸುವಂತೆ ನಟಿಸುತ್ತಿದ್ದಾರೆ. ಆದರೆ ಈಗ ಜಾರಿಯಾಗಿರುವ ಮೂರು ಹೊಸ ಕಾನೂನುಗಳನ್ನು 146 ಸಂಸದರನ್ನು ಅಮಾನತುಗೊಳಿಸಿದ ಸಮಯದಲ್ಲಿ ಬಲವಂತವಾಗಿ ಅಂಗೀಕರಿಸಲಾಗಿದೆ ಎಂಬ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
ಗ್ವಾಲಿಯರ್‌ನಲ್ಲಿ ಮೊದಲ ಪ್ರಕರಣ ದಾಖಲು
ಹೊಸ ಕ್ರಿಮಿನಲ್ ಅಪರಾಧ ಕಾನೂನಿನಡಿ ಮೊದಲ ಪ್ರಕರಣವನ್ನು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ದಾಖಲಿಸಲಾಗಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು. 'ದ್ವಿಚಕ್ರವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಮಧ್ಯರಾತ್ರಿ 12.10ಕ್ಕೆ ಮೊದಲ ಪ್ರಕರಣ ದಾಖಲಿಸಲಾಗಿದೆ' ಎಂದು ತಿಳಿಸಿದರು. 'ದೆಹಲಿಯ ಕಮಲಾ ಮಾರುಕಟ್ಟೆಯಲ್ಲಿ ಬೀದಿ ಬದಿ ವ್ಯಾಪಾರಿಯೊಬ್ಬರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದರೂ ಆ ಬಳಿಕ ಅದನ್ನು ಕೈಬಿಟ್ಟಿದ್ದಾರೆ' ಎಂದು ಸ್ಪಷ್ಟಪಡಿಸಿದರು.