ನವದೆಹಲಿ: ತನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ತೆಗೆಯಲು ಸೂಚಿಸಿದ್ದರೂ ಅದನ್ನು ಪಾಲಿಸಿಲ್ಲ ಎಂದು ಪುನರ್ ಅರ್ಜಿ ಸಲ್ಲಿಸಿದ್ದ ಪತ್ರಕರ್ತ ರಜತ್ ಶರ್ಮಾ ಅವರ ಮನವಿಯನ್ನು ದೆಹಲಿ ಹೈಕೋರ್ಟ್ ಪುರಸ್ಕರಿಸಿದೆ. ಈ ಸಂಬಂಧ ಕಾಂಗ್ರೆಸ್ ಮುಂಖಡರಾದ ಜೈರಾಮ್ ರಮೇಶ್, ಪವನ್ ಖೇರಾ ಹಾಗು ರಾಗಿಣಿ ನಾಯಕ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ನ್ಯಾ. ಮನಮೀತ್ ಪಿ.ಎಸ್. ಅರೋರಾ ಅವರಿದ್ದ ಪೀಠವು, ಕಾಂಗ್ರೆಸ್ ಮುಖಂಡರ ಜತೆಗೆ ಸಾಮಾಜಿಕ ಮಾಧ್ಯಮ ಎಕ್ಸ್‌ಗೂ ನೋಟಿಸ್ ಜಾರಿ ಮಾಡಿದೆ. ನೋಟಿಸ್‌ಗೆ ಆ. 22ರೊಳಗಾಗಿ ಉತ್ತರಿಸುವಂತೆ ನಿರ್ದೇಶಿಸಿದೆ.
'ಲೋಕಸಭಾ ಚುನಾವಣೆಯ ಫಲಿತಾಂಶದ ದಿನದಂದು ಅರ್ಜಿದಾರರಾದ ರಾಕೇಶ್ ಶರ್ಮಾ ಅವರು ನಿಂದನೀಯ ಭಾಷೆಯನ್ನು ಪ್ರಯೋಗಿಸಿದ್ದಾರೆ ಎಂದು ಕಾಂಗ್ರೆಸ್‌ನ ಮೂವರು ನಾಯಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಸಹಿತ ಬರೆದುಕೊಂಡಿದ್ದರು ಎಂದು ಅರ್ಜಿದಾರರು ಆರೋಪಿಸಿದ್ದರು. ಇದಕ್ಕೆ ಮಧ್ಯಂತರ ಆದೇಶ ಪ್ರಕಟಿಸಿದ ಹೈಕೋರ್ಟ್, ಪೋಸ್ಟ್ ಅಳಿಸಿ ಹಾಕುವಂತೆ ನಿರ್ದೇಶಿಸಿತ್ತು. ಜತೆಗೆ, ಪೋಸ್ಟ್ ಅನ್ನು ಹಂಚಿಕೊಳ್ಳಲು ಬಿಟ್ಟಲ್ಲಿ ಅರ್ಜಿದಾರರಿಗೆ ಸಾಕಷ್ಟು ನಷ್ಟ ಉಂಟಾಗಲಿದೆ' ಎಂದು ಅಭಿಪ್ರಾಯಪಟ್ಟಿತ್ತು.
ಈ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಎಕ್ಸ್ ಪರ ವಕೀಲರು, 'ಅರ್ಜಿದಾರರು ಪಕ್ಷಪಾತ ಮಾಡುತ್ತಿದ್ದಾರೆ. ಈ ಪೋಸ್ಟ್ ಅನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ. ಆದರೆ ಬೇರೆಡೆ ಇದು ಲಭ್ಯವಿದೆ' ಎಂದು ಹೇಳಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶರ್ಮಾ ಪರ ವಕೀಲರು, 'ಕಾಂಗ್ರೆಸ್ ಮುಖಂಡರು ಭಾರತದಲ್ಲಿನ ಐಪಿ ವಿಳಾಸ ಬಳಸಿಕೊಂಡು ಪೋಸ್ಟ್ ಹಂಚಿಕೊಂಡಿದ್ದಾರೆ. ಹೀಗಾಗಿ ಇದು ಭಾರತ ಮಾತ್ರವಲ್ಲದೇ, ಜಗತ್ತಿನ ಇತರ ಭಾಗಗಳಲ್ಲೂ ಪ್ರಸಾರವಾಗದಂತೆ ತಡೆಯಲು ಆದೇಶಿಸಬೇಕು' ಎಂದು ಮನವಿ ಮಾಡಿದರು.
ನ್ಯೂಸ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್‌ನ (ಇಂಡಿಯಾ ಟಿ.ವಿ.) ಮುಖ್ಯ ಸಂಪಾದಕರಾಗಿರುವ ಶರ್ಮಾ ಅವರು ತಮ್ಮ ಟಿ.ವಿ. ಕಾರ್ಯಕ್ರಮದಲ್ಲಿ ರಾಗಿಣಿ ನಾಯಕ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದೆನ್ನುವ ಮೂಲಕ ಈ ವಿವಾದ ಆರಂಭವಾಯಿತು.
'ಜೂನ್ 4ರಂದು ಚರ್ಚೆ ನಡೆದಿತ್ತು. ಆದರೆ ಕಾಂಗ್ರೆಸ್ ನಾಯಕರು ಜೂನ್ 10 ಹಾಗೂ 11ರಂದು ಈ ಕುರಿತು ಪೋಸ್ಟ್ ಮಾಡಿದ್ದಾರೆ. ಆದರೆ ಇದರಲ್ಲಿ ಅವಹೇಳನಕಾರಿ ಹೇಳಿಕೆಯನ್ನು ತುರುಕಿದ್ದಾರೆ. ಮೂಲ ವಿಡಿಯೊದಲ್ಲಿ ಇದು ಇಲ್ಲವೇ ಇಲ್ಲ' ಎಂದು ಶರ್ಮಾ ಪರ ವಕೀಲರು ಹೇಳಿದ್ದಾರೆ.