ನವದೆಹಲಿ: ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಗೋಡೆಗಳ ಮೇಲೆ ಜಾತಿವಾದಿ ನಿಂದನೆಗಳು ಹಾಗೂ ಕೋಮುಘೋಷಣೆಗಳು ಶನಿವಾರ ಕಂಡುಬಂದಿವೆ ಎಂದು ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಆರೋಪಿಸಿದೆ.
ಈ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ವಿಶ್ವವಿದ್ಯಾಲಯದ ಸಿಬ್ಬಂದಿ ಗೋಡೆಗೆ ಬಣ್ಣ ಬಳಿದು, ಘೋಷಣೆಗಳನ್ನು ಅಳಿಸಿದ್ದಾರೆ. ಎನ್‌ಎಸ್‌ಯುಐ ಆರೋಪಕ್ಕೆ ತಕ್ಷಣದ ಪ್ರತಿಕ್ರಿಯೆ ವಿದ್ಯಾರ್ಥಿ ಡೀನ್ ಮನುರಾಧಾ ಚೌಧರಿ ಅವರಿಂದ ಬರಲಿಲ್ಲ ಎಂದು ಪಿಟಿಐ ವರದಿ ಮಾಡಿದೆ. ಕಾವೇರಿ ವಿದ್ಯಾರ್ಥಿನಿಲಯದ ವಾರ್ಡನ್ ಮನೀಶ್ ಕುಮಾರ್ ಬರ್ನ್ವಾಲ್ ಅವರು ಪ್ರತಿಕ್ರಿಯೆಗೆ ನಿರಾಕರಿಸಿದರು.
'ಇತ್ತೀಚಿಗೆ ಕಾವೇರಿ ವಿದ್ಯಾರ್ಥಿನಿಲಯದಲ್ಲಿ ನಡೆದ ಘಟನೆಯಿಂದ ಜೆಎನ್‌ಯುನಲ್ಲಿರುವ ಮನುಷ್ಯರಾದ ನಮಗೆ ತೀವ್ರ ಆಘಾತವನ್ನುಂಟು ಮಾಡಿದೆ. ದಲಿತ ಬಹುಜನ ಸಮುದಾಯದ ವಿರುದ್ಧ ಜಾತಿನಿಂದನೆ ಮಾಡಲಾಗಿದೆ. ಮತ್ತೊಂದೆಡೆ, ಬ್ರಾಹ್ಮಣ, ಬನಿಯಾ ಸಮುದಾಯಗಳಿಗೆ ಹಾಗೂ ಆರ್‌ಎಸ್‌ಎಸ್‌ಗೆ ಜಿಂದಾಬಾದ್ ಹೇಳಲಾಗಿದೆ. ಈ ಹೇಳಿಕೆ ಮೂಲಕ ಬ್ರಾಹ್ಮಣ್ಯ ಹಾಗೂ ಮನುವಾದಿ ಮನಸ್ಥಿತಿಯ ಆರ್‌ಎಸ್‌ಎಸ್ ಹಾಗೂ ಅದರ ಬೆಂಬಲಿಗರು ವಿಶ್ವವಿದ್ಯಾಲಯದ ಸಮುದಾಯದಲ್ಲಿದ್ದು, ಅವರಿಂದಲೇ ಈ ಘೋಷಣೆಗಳು ಹೊರಬಿದ್ದಿವೆ. ಈ ಕುರಿತು ವಿಶ್ವವಿದ್ಯಾಲಯದ ಆಡಳಿತವು ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ವಿದ್ಯಾರ್ಥಿ ಸಂಘಟನೆ ತನ್ನ ಪ್ರಕಟಣೆಯಲ್ಲಿ ಹೇಳಿದೆ.
'ಭಾರತ ಆಕ್ರಮಿತ ಕಾಶ್ಮೀರ', 'ಸ್ವತಂತ್ರ ಕಾಶ್ಮೀರ' ಹಾಗೂ 'ಭಾಗವಾ ಜಲೇಗಾ' ಸೇರಿದಂತೆ ರಾಷ್ಟ್ರ ವಿರೋಧಿ ಹೇಳಿಕೆಗಳು ಹಾಗೂ ಗೋಡೆ ಬರಹಗಳು ನಿರಂತರವಾಗಿ ಕ್ಯಾಂಪಸ್ ಒಳಗೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಕಳೆದ ವರ್ಷ ಜೆಎನ್‌ಯು ಸಮಿತಿಯೊಂದನ್ನು ರಚಿಸಿತ್ತು.