ನವದೆಹಲಿ: ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೌರವ ನಮನ ಸಲ್ಲಿಸಿದ್ದಾರೆ.
'1999ರಲ್ಲಿ ಕಾರ್ಗಿಲ್ ಶಿಖರಗಳಲ್ಲಿ ಭಾರತಮಾತೆಯನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಪ್ರತಿಯೊಬ್ಬ ಸೈನಿಕನಿಗೆ ನಾನು ಗೌರವ ಸಲ್ಲಿಸುತ್ತೇನೆ. ಅವರ ತ್ಯಾಗ ಮತ್ತು ಶೌರ್ಯದಿಂದ ಎಲ್ಲಾ ದೇಶವಾಸಿಗಳು ಸ್ಫೂರ್ತಿ ಪಡೆಯುತ್ತಾರೆ ಎಂಬ ವಿಶ್ವಾಸ ನನಗಿದೆ. ಜೈ ಹಿಂದ್' ಎಂದು ಪೋಸ್ಟ್ ಮಾಡಿದ್ದಾರೆ.
'ಇಂದು ಕಾರ್ಗಿಲ್ ವಿಜಯ ದಿವಸದ ರಜತ ಮಹೋತ್ಸವ. 1999ರ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ವೀರ ಸೈನಿಕರ ಅದಮ್ಯ ಮನೋಭಾವ ಮತ್ತು ಧೈರ್ಯವನ್ನು ನಾವು ಸ್ಮರಿಸಿಕೊಳ್ಳುತ್ತೇವೆ' ಎಂದು ರಾಜನಾಥ್ ಸಿಂಗ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಸೈನಿಕರ ಅಚಲವಾದ ಬದ್ಧತೆ, ಶೌರ್ಯ ಮತ್ತು ದೇಶಪ್ರೇಮವು ನಮ್ಮ ದೇಶವು ಸುರಕ್ಷಿತವಾಗಿ ಉಳಿಯುವಂತೆ ಮಾಡಿದೆ. ಅವರ ಸೇವೆ ಮತ್ತು ತ್ಯಾಗವು ಪ್ರತಿಯೊಬ್ಬ ಭಾರತೀಯ ಮತ್ತು ನಮ್ಮ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ' ಎಂದು ಅವರು ಹೇಳಿದ್ದಾರೆ.
1999ರ ಜುಲೈ 26ರಂದು ಕಾರ್ಗಿಲ್ ಯುದ್ಧವು ಅಧಿಕೃತವಾಗಿ ಕೊನೆಗೊಂಡಿತ್ತು. ಪಾಕಿಸ್ತಾನ ನುಸುಳುಕೋರರು ವಶಪಡಿಸಿಕೊಂಡಿದ್ದ ಪರ್ವತ ಶ್ರೇಣಿಗಳನ್ನು ಭಾರತೀಯ ಸೈನಿಕರು ಯಶಸ್ವಿಯಾಗಿ ಮರು ವಶಕ್ಕೆ ಪಡೆದಿದ್ದರು. ಹೀಗಾಗಿ ದೇಶದಾದ್ಯಂತ ಜುಲೈ 26ರಂದು 'ಕಾರ್ಗಿಲ್ ವಿಜಯ ದಿವಸ' ಎಂದು ಆಚರಿಸಲಾಗತ್ತದೆ.
ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿದ ಸ್ಮರಣಾರ್ಥ ಈ ದಿನವನ್ನು ' ಕಾರ್ಗಿಲ್ ವಿಜಯ ದಿವಸ' ಎಂದು ಆಚರಿಸಲಾಗುತ್ತದೆ.