ನವದೆಹಲಿ: 'ನಾನು ಕಡುಬಡತನದ ಹಿನ್ನೆಲೆಯವಳು. ಈಗಾಲೇ ನನ್ನ ಮನೆಗೆ ಅಡುಗೆ ಅನಿಲ ಸಂಪರ್ಕ ಇದೆ ಎನ್ನುವ ಕಾರಣಕ್ಕೆ ಉಜ್ವಲ ಯೋಜನೆ ಅಡಿಯಲ್ಲಿ ಸಬ್ಸಿಡಿಯನ್ನು ನಿರಾಕರಿಸಲಾಗುತ್ತಿದೆ' ಎಂದು ದೂರಿ ಮಹಿಳೆಯೊಬ್ಬರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ಸೂಚನೆ ನೀಡಿದೆ.
'ಉಜ್ವಲ ಅಡಿಯಲ್ಲಿ ಸಿಲಿಂಡರ್‌ಗೆ ಸಬ್ಸಿಡಿ ನೀಡುವುದನ್ನು ಈ ಮಹಿಳೆಗೆ ಯಾಕಾಗಿ ವಿಸ್ತರಣೆ ಮಾಡಬಾರದು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ' ಎಂದು ನ್ಯಾಯಮೂರ್ತಿ ಸಂಜೀವ್ ನರೂಲಾ ಅವರು ಕೇಂದ್ರಕ್ಕೆ ಸೂಚಿಸಿದ್ದಾರೆ.
'ಯಾರು ಈವರೆಗೆ ಅಡುಗೆ ಅನಿಲ ಸಂಪರ್ಕವನ್ನು ಪಡೆದಿಲ್ಲವೊ ಅಂಥವರಿಗೆ ಉಜ್ವಲ ಯೋಜನೆ ಅನ್ವಯವಾಗುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಸರ್ಕಾರದ ಯೋಜನೆ ಪ್ರಕಾರ, ಸಬ್ಸಿಡಿ ಪಡೆದುಕೊಳ್ಳುವ ಎಲ್ಲ ಅರ್ಹತೆ ನನಗಿದೆ. ಈಗಾಗಲೇ ಅಡುಗೆ ಅನಿಲ ಸಂಪರ್ಕ ಇದೆ ಎನ್ನುವ ಕಾರಣಕ್ಕೆ ಸಬ್ಸಿಡಿ ನೀಡದೆ ಇರುವುದು ಅನ್ಯಾಯವಾಗುತ್ತದೆ' ಎಂದು ಮಹಿಳೆ ಅರ್ಜಿಯಲ್ಲಿ ತಿಳಿಸಿದ್ದಾರೆ.
'ಈ ಮೊದಲೇ ಅಡುಗೆ ಅನಿಲ ಸಂಪರ್ಕ ಪಡೆದುಕೊಂಡಿರುವ ಮತ್ತು ಉಜ್ವಲ ಯೋಜನೆಯಲ್ಲಿ ಸಂಪರ್ಕ ಹೊಂದಿದ ಫಲಾನುಭವಿಗಳ ಮಧ್ಯೆ ಸಬ್ಸಿಡಿ ನೀಡುವುದರಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಇದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗುತ್ತದೆ' ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಅರ್ಜಿಯ ಮುಂದಿನ ವಿಚಾರಣೆಯು ನವೆಂಬರ್‌ನಲ್ಲಿ ನಡೆಯಲಿದೆ.