ವಾಷಿಂಗ್ಟನ್: ಅಮೆರಿಕದ ನ್ಯೂಜೆರ್ಸಿಯಲ್ಲಿ ಭಾರತೀಯ ಮೂಲದ ಉದ್ಯಮಿಯೊಬ್ಬರು ತಮ್ಮ ಮನೆ ಮುಂದೆ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರ ಪ್ರತಿಮೆಯನ್ನು ನಿರ್ಮಿಸಿದ್ದು, ಇದೀಗ ಈ ಸ್ಥಳವನ್ನು ಪ್ರವಾಸಿಗರ ಆರ್ಕಷಣೇಯ ತಾಣವೆಂದು ಗೂಗಲ್ ಗುರುತಿಸಿದೆ.
ಭಾರತ ಮೂಲದ ಅಮೆರಿಕ ಉದ್ಯಮಿ ಗೋಪಿ ಸೇಠ್ ಎಂಬುವವರು 2022ರಲ್ಲಿ ತಮ್ಮ ನಿವಾಸದ ಎದುರು ಅಮಿತಾಬ್ ಬಚ್ಚನ್ ಅವರ ಪ್ರತಿಮೆಯನ್ನು ನಿರ್ಮಿಸಿದ್ದರು. ಎರಡು ವರ್ಷಗಳಲ್ಲಿ ಸಾಕಷ್ಟು ನಟನ ಅಭಿಮಾನಿಗಳು ತಮ್ಮ ನಿವಾಸದ ಬಳಿ ಭೇಟಿ ನೀಡಿರುವ ಬಗ್ಗೆ ಸೇಠ್ ಸಂತಸ ವ್ಯಕ್ತಪಡಿಸಿದ್ದಾರೆ.
ನ್ಯೂಯಾರ್ಕ್‌ನಿಂದ 35 ಕಿ.ಮೀ ದೂರದಲ್ಲಿರುವ ಎಡಿಸನ್ ನಗರದ ನಿವಾಸದ ಹೊರಭಾಗದಲ್ಲಿ ಅಳೆತ್ತರದ ಅಮಿತಾಬ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
'ಅಮಿತಾಬ್‌ರ ಅಭಿಮಾನಿಗಳು ಇಲ್ಲಿಗೆ ಭೇಟಿ ನೀಡಿ, ಸೆಲ್ಫಿ, ವಿಡಿಯೊ ಫೋಟೊಗಳನ್ನು ಕ್ಲಿಕಿಸಿಕೊಂಡು ಇನ್‌ಸ್ಟಾಗ್ರಾಮ್, ಎಕ್ಸ್, ಫೇಸ್‌ಬುಕ್, ಯೂಬ್ಯೂಟ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಲೋಕೇಷನ್ ಅನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡುತ್ತಾರೆ. ಹೀಗಾಗಿ ನಟನ ಪ್ರತಿಮೆಯು ಪ್ರವಾಸಿ ತಾಣವಾಗಿ ಗೂಗಲ್ ಮ್ಯಾಪ್‌ನಲ್ಲಿ ಗುರುತಿಸಿಕೊಂಡಿದ್ದು, ಟ್ರೆಂಡ್ ಆಗಿದೆ ಎಂದು ಪ್ರತಿಮೆ ಸ್ಥಾಪಕ ಉದ್ಯಮಿ ಗೋಪಿ ಸೇಠ್ ಮಾಹಿತಿ ಹಂಚಿಕೊಂಡಿದ್ದಾರೆ.
ಇಲ್ಲಿಗೆ ಬರುವ ಅಭಿಮಾನಿಗಳು ನಟನ ಅಭಿನಯದ ಪೌರಾಣಿಕ ಪಾತ್ರಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ವಿವಿಧ ದೇಶಗಳಿಂದ ಅಭಿಮಾನಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ ಎಂದೂ ಸುದ್ದಿಸಂಸ್ಥೆ ಪಿಟಿಐಗೆ ಸೇಠ್ ತಿಳಿಸಿದ್ದಾರೆ.