ನವದೆಹಲಿ: 'ನೀಟ್-ಯುಜಿ' ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ (ಆರ್‌ಐಎಂಎಸ್) ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯನ್ನು ಶುಕ್ರವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ದಿನಗಳ ಸುದೀರ್ಘ ವಿಚಾರಣೆ ಬಳಿಕ ಸುರಭಿ ಕುಮಾರಿ ಎಂಬವರನ್ನು ಬಂಧಿಸಲಾಗಿದೆ. ಸೋರಿಕೆಯಾದ ಪ್ರಶ್ನೆಪತ್ರಿಕೆಗಳಿಗೆ ಉತ್ತರ ಸಿದ್ಧಪಡಿಸಿಕೊಟ್ಟಿರುವ ಆರೋಪ ಸುರಭಿ ಅವರ ಮೇಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಂಕಜ್ ಕುಮಾರ್ ಸಿಂಗ್ ಅವರು ಕದ್ದಿದ್ದ ಪ್ರಶ್ನೆಪತ್ರಿಕೆಗಳಿಗೆ ಉತ್ತರಗಳನ್ನು ಸಿದ್ದಪಡಿಸಲು ಸುರಭಿ ಅವರು ನೀಟ್-ಯುಜಿ ಪರೀಕ್ಷೆ ನಡೆದ ದಿನವಾದ ಮೇ 5ರಂದು ಬೆಳಿಗ್ಗೆ ಹಜಾರಿಬಾಗ್‌ನಲ್ಲಿ ಇದ್ದರು ಎಂದು ಆರೋಪಿಸಲಾಗಿದೆ. ಉತ್ತರಗಳನ್ನು ಸಿದ್ಧಪಡಿಸಿಕೊಟ್ಟ ಐವರು ಸದಸ್ಯರ ತಂಡದಲ್ಲಿ ಅವರೂ ಇದ್ದರು ಎನ್ನಲಾಗಿದೆ.
ಜೆಮ್‌ಶೆಡ್‌ಪುರದ ಎನ್‌ಐಟಿಯಲ್ಲಿ 2017ರಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಪಂಕಜ್ ಕುಮಾರ್ ಅವರು ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಕಚೇರಿಯಲ್ಲಿನ ಪೆಟ್ಟಿಗೆಯಿಂದ ಪ್ರಶ್ನೆಪತ್ರಿಕೆ ಕಳವು ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ. 'ನೀಟ್-ಯುಜಿ' ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇದುವರೆಗೆ 16 ಜನರನ್ನು ಬಂಧಿಸಿದೆ.
'ನೀಟ್ ಪತ್ರಿಕೆ ಸೋರಿಕೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯನ್ನು ವಿಚಾರಣೆಗೆ ಒಳಪಡಿಸುವ ಕುರಿತು ಸಿಬಿಐ ತಂಡವು ಬುಧವಾರ ಆರ್‌ಐಎಂಎಸ್ ಸಂಸ್ಥೆಗೆ ಮಾಹಿತಿ ನೀಡಿತ್ತು. ಸಂಸ್ಥೆಯ ಆಡಳಿತ ಮಂಡಳಿಯು ಸಿಬಿಐ ತಂಡಕ್ಕೆ ಸಂಪೂರ್ಣ ಸಹಕಾರ ನೀಡಿದೆ. ತನಿಖಾ ತಂಡವು ಗುರುವಾರವೂ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಸಂಸ್ಥೆಯ ಆಡಳಿತ ಮಂಡಳಿಯು ವಿದ್ಯಾರ್ಥಿನಿಯ ಪೋಷಕರಿಗೂ ಈ ಬಗ್ಗೆ ಮಾಹಿತಿ ನೀಡಿದೆ' ಎಂದು ಆರ್‌ಐಎಂಎಸ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೀವ್ ರಂಜನ್ ಅವರು ತಿಳಿಸಿದ್ದಾರೆ.
ಪ್ರಶ್ನೆಗಳಿಗೆ ಉತ್ತರ ಸಿದ್ಧಪಡಿಸಿದ ಆರೋಪದಲ್ಲಿ ಸಿಬಿಐ, ಪಟ್ನಾದ ಏಮ್ಸ್‌ನ ನಾಲ್ವರು ವಿದ್ಯಾರ್ಥಿಗಳನ್ನು ಗುರುವಾರ ಬಂಧಿಸಿತ್ತು. ಅವರನ್ನು ನಾಲ್ಕು ದಿನಗಳವರೆಗೆ ಸಿಬಿಐ ಕಸ್ಟಡಿಗೆ ನೀಡಲಾಗಿದೆ. ಪ್ರಶ್ನೆಗಳಿಗೆ ಉತ್ತರ ಸಿದ್ಧಪಡಿಸಿಕೊಡುವ ಜವಾಬ್ದಾರಿಯನ್ನು ಐವರು ಸದಸ್ಯರ ಈ ತಂಡಕ್ಕೆ ನೀಡಲಾಗಿತ್ತು ಎಂದು ಮೂಲಗಳು ಹೇಳಿವೆ.
ಕೇಂದ್ರದ ಪ್ರತಿಕ್ರಿಯೆ ಕೇಳಿದ 'ಸುಪ್ರೀಂ'
ನವದೆಹಲಿ: ನೀಟ್ -ಸೂಪರ್ ಸ್ಪೆಷಾಲಿಟಿ ಪರೀಕ್ಷೆಯನ್ನು (ನೀಟ್-ಎಸ್‌ಎಸ್) ಈ ವರ್ಷ ನಡೆಸದಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರ ಮತ್ತು ಇತರರ ಪ್ರತಿಕ್ರಿಯೆ ಕೇಳಿದೆ.
ಎಂಡಿ ಎಂಎಸ್ ಡಿಎನ್‌ಬಿಯಂತಹ ಸ್ನಾತಕೋತ್ತರ ಪದವಿ ಅಥವಾ ಅದಕ್ಕೆ ಸಮನಾದ ಪದವಿಗಳನ್ನು ಹೊಂದಿರುವ ವೈದ್ಯರು ಸೂಪರ್-ಸ್ಪೆಶಾಲಿಟಿ ಕೋರ್ಸ್‌ಗಳಿಗೆ ಅರ್ಹತೆ ಪಡೆಯಲು ನೀಟ್-ಎಸ್‌ಎಸ್ ಪರೀಕ್ಷೆಗೆ ಹಾಜರಾಗುವರು. ಎನ್‌ಎಂಸಿಯು ಪರೀಕ್ಷೆಯನ್ನು ಈ ವರ್ಷ ನಡೆಸದಿರಲು ನಿರ್ಧರಿಸಿದೆ ಎಂದು 13 ಆಕಾಂಕ್ಷಿಗಳ ಪರ ಹಾಜರಿದ್ದ ವಕೀಲರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು. ಮಾಧ್ಯಮಗಳಲ್ಲಿ ಬಂದ ವರದಿಯ ಪ್ರಕಾರ ನೀಟ್-ಎಸ್‌ಎಸ್ ಪರೀಕ್ಷೆಯು 2025ರ ಜನವರಿಯಲ್ಲಿ ನಡೆಯುವ ಸಾಧ್ಯತೆಯಿದೆ.