ನವದೆಹಲಿ: 'ನೀಟ್- ಯುಜಿ' ಪರೀಕ್ಷೆಯಲ್ಲಿ ಒಎಂಆರ್ ಶೀಟ್ ದುರ್ಬಳಕೆಯಾಗಿದೆ ಎಂದು ಆರೋಪಿಸಿ ಅಭ್ಯರ್ಥಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಎರಡು ವಾರಗಳ ನಂತರ ತೆಗೆದುಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿಗಳಾದ ಸಿ.ಟಿ.ರವಿಕುಮಾರ್ ಮತ್ತು ಮನೋಜ್ ಮಿಶ್ರಾ ಅವರು ಇದ್ದ ರಜಾಕಾಲದ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದಿತ್ತು.
ತಮ್ಮ ಅರ್ಜಿದಾರ ಒಎಂಆರ್ ಶೀಟ್ ಅನ್ನು ಬದಲಿಸಲಾಗಿದೆ ಎಂದು ವಕೀಲರು ಆರೋಪಿಸಿದರು. ಅರ್ಜಿ ಪರಿಶೀಲಿಸಿದ ಪೀಠವು, ಅರ್ಜಿದಾರರು ಜೂನ್ 23ರ ಮರು ಪರೀಕ್ಷೆಗೆ ಹಾಜರಾಗಲು ಅನುಮತಿ ಕೋರಿದ್ದಾರೆ. ಆದರೆ ಮರು ಪರೀಕ್ಷೆ ಮುಗಿದು ಹೋಗಿದೆಯಲ್ಲ ಎಂದು ಹೇಳಿತು.
ನೀಟ್ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ಇತರ ಅರ್ಜಿಗಳು ಹಾಗೂ ಮೇ 5ರಂದು ನಡೆದಿದ್ದ ನೀಟ್ ಪರೀಕ್ಷೆಯ ರದ್ದತಿಗೆ ಕೋರಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇವೆ ಎಂದು ವಕೀಲರು ಪೀಠಕ್ಕೆ ತಿಳಿಸಿದರು.
ಅರ್ಜಿಯನ್ನು ಮುಂದಿನ ವಾರ ವಿಚಾರಣೆಗೆ ಪಟ್ಟಿ ಮಾಡುವುದಾಗಿ ಪೀಠ ಆರಂಭದಲ್ಲಿ ಹೇಳಿತ್ತು. ಆದರೆ, ಎನ್‌ಟಿಎ ಪರ ಹಾಜರಾದ ವಕೀಲರು ಎರಡು ವಾರಗಳ ಬಳಿಕ ವಿಚಾರಣೆಗೆ ಪಟ್ಟಿ ಮಾಡುವಂತೆ ಮನವಿ ಮಾಡಿದರು. ಅದನ್ನು ಪೀಠ ಮಾನ್ಯ ಮಾಡಿತು.
ಜೂನ್ 27ರಂದು ನಡೆದ ಪ್ರತ್ಯೇಕ ಅರ್ಜಿಯ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್ ಒಎಂಆರ್ ಶೀಟ್‌ಗಳ ಕುರಿತು ಕುಂದುಕೊರತೆಗಳನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಸಮಯದ ಮಿತಿ ನಿಗದಿಪಡಿಸಲಾಗಿತ್ತೇ ಎಂದು ಎನ್‌ಟಿಎ ಅನ್ನು ಕೇಳಿತ್ತು.
ಪರೀಕ್ಷೆಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಇತರ ಅರ್ಜಿಗಳು ಇದೇ 8ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿವೆ.
ಸಂಸತ್ತಿನೆಡೆಗೆ ವಿದ್ಯಾರ್ಥಿಗಳ ನಡಿಗೆ
'ನೀಟ್-ಯುಜಿ' 'ಯುಜಿಸಿ-ನೆಟ್' ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಇಲ್ಲಿನ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳಿಗೆ ಆಗ್ರಹಿಸಿ ಮಂಗಳವಾರ ಸಂಸತ್ತಿನತ್ತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದ್ದಾರೆ. 'ಎನ್‌ಟಿಎ ವಿರುದ್ಧ ಭಾರತ' ಎಂಬ ಬ್ಯಾನರ್ ಅಡಿ ವಿದ್ಯಾರ್ಥಿಗಳು ಕಳೆದ ಬುಧವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಎನ್‌ಟಿಎ ನಿಷೇಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ವಿದ್ಯಾರ್ಥಿಗಳು ನೀಟ್ ಮರು ಪರೀಕ್ಷೆಗೆ ಒತ್ತಾಯಿಸಿದ್ದಾರೆ. ವಿದ್ಯಾರ್ಥಿ ಸಂಘಟನೆಗಳಾದ ಎಐಎಸ್‌ಎ ದೆಹಲಿ ವಿಶ್ವವಿದ್ಯಾಲಯದ ಕೆವೈಎಸ್ ಸಂಘಟನೆಯ ಸದಸ್ಯರು ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಕೈಜೋಡಿಸಿದ್ದಾರೆ.