ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಕಿಂಗ್‌ಪಿನ್ ರಾಕಿ ಅಲಿಯಾಸ್ ರಾಕೇಶ್ ರಂಜನ್ ಎಂಬಾತನನ್ನು ಸಿಬಿಐ ಗುರುವಾರ ಬಂಧಿಸಿದೆ.
ನಳಂದಾ ಮೂಲದವನಾದ ರಾಕಿ, ಸಂಜೀವ್ ಮುಖಿಯಾ ಎಂಬಾತನ ಸಹಚರ.
ನೀಟ್ ಪರೀಕ್ಷೆಯಲ್ಲಿನ ಅವ್ಯವಹಾರಗಳ ತನಿಖೆಗಾಗಿ ಸಿಬಿಐಗೆ ಪ್ರಕರಣ ವರ್ಗಾವಣೆಯಾದ ದಿನದಿಂದಲೂ ಈತನ ಬಂಧನಕ್ಕೆ ಜಾಲ ಬೀಸಲಾಗಿತ್ತು. ಕೋಲ್ಕತ್ತ ಹಾಗೂ ಬಿಹಾರದಲ್ಲಿ ವ್ಯಾಪಕ ಶೋಧ ನಡೆಸಲಾಗಿತ್ತು. ತಲೆಮರೆಸಿಕೊಂಡಿದ್ದ ಈತನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ನಂತರ ಈತನನ್ನು ಪಟ್ನಾದ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. 10 ದಿನಗಳ ಕಾಲ ಈತನನ್ನು ಪೊಲೀಸ್ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ಪ್ರಕರಣ ಸಂಬಂಧ ಬಿಹಾರ, ಜಾರ್ಖಂಡ್‌ನ ಸುಮಾರು 15 ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯ ನಡೆಸಿದೆ. ಜಾರ್ಖಂಡ್‌ನ ಹಝಾರಿಬಾಗ್ ಮೂಲದ ಓಯಸಿಸ್ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಮತ್ತು ಉಪ ಪ್ರಾಚಾರ್ಯರನ್ನು ಸಿಬಿಐ ಬಂಧಿಸಿದೆ. ಈ ಇಬ್ಬರು ತಮ್ಮ ಜಾಗವನ್ನು ನೀಟ್ ಅಭ್ಯರ್ಥಿಗಳಿಗೆ ಅಕ್ರಮವಾಗಿ ನೀಡಿದ್ದರು. ಈ ಸ್ಥಳದಿಂದಲೇ ಸುಟ್ಟಿರುವ ಪ್ರಶ್ನೆಪತ್ರಿಕೆಯ ಅವಶೇಷಗಳು ಲಭ್ಯವಾಗಿದ್ದು ಅವುಗಳನ್ನು ಬಿಹಾರ ಪೊಲಿಸರು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣದಲ್ಲಿ ಈವರೆಗೂ ಆರು ಎಫ್‌ಐಆರ್‌ಗಳನ್ನು ಸಿಬಿಐ ದಾಖಲಿಸಿದೆ. ಇದರಲ್ಲಿ ಬಿಹಾರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಗುಜರಾತ್, ರಾಜಸ್ಥಾನ ಹಾಗೂ ಮಹಾರಾಷ್ಟ್ರದಲ್ಲಿ ಅಭ್ಯರ್ಥಿಗಳ ಸೋಗಿನಲ್ಲಿ ಬೇರೊಬ್ಬರು ಪರೀಕ್ಷೆ ಬರೆದಿದ್ದು ಹಾಗೂ ವಂಚನೆ ಪ್ರಕರಣಗಳನ್ನು ದಾಖಲಿಸಲಾಗಿದೆ.
ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯದ ನಿರ್ದೇಶನದಂತೆ ಸಿಬಿಐ ಎಫ್‌ಐಆರ್‌ಗಳನ್ನು ದಾಖಲಿಸಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನೀಟ್-ಯುಜಿ ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳು ಎಂಬಿಬಿಎಸ್, ಬಿಡಿಎಸ್, ಆಯುಷ್ ಹಾಗೂ ಇತರ ವೈದ್ಯಕೀಯ ಕೋರ್ಸ್‌ಗಳನ್ನು ಬೋಧಿಸುವ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಿಗೆ ಸೇರಬಹುದಾಗಿದೆ. 2024ರಲ್ಲಿ ಮೇ 5ರಂದು ಈ ಪರೀಕ್ಷೆ ನಡೆಸಲಾಗಿತ್ತು. ದೇಶದ 571 ನಗರಗಳಲ್ಲಿ 4,750 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ವಿದೇಶದಲ್ಲಿನ 14 ಕೇಂದ್ರಗಳಲ್ಲೂ ಈ ಪರೀಕ್ಷೆ ನಡೆಸಲಾಗಿತ್ತು. ಸುಮಾರು 23 ಲಕ್ಷ ಅಭ್ಯರ್ಥಿಗಳು ಈ ಪರೀಕ್ಷೆ ಎದುರಿಸಿದ್ದರು.