ಕೋಲ್ಕತ್ತ: ಜುಲೈ 27ರಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಚಿತಪಡಿಸಿದ್ದಾರೆ.
ಕೋಲ್ಕತ್ತ: ಜುಲೈ 27ರಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಚಿತಪಡಿಸಿದ್ದಾರೆ.
ಇದರೊಂದಿಗೆ ಮಮತಾ ಬ್ಯಾನರ್ಜಿ ಅವರು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ದೆಹಲಿಗೆ ಹೊರಡುವ ಮುನ್ನ ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಮಮತಾ, ನಾನು ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ. ಕೇಂದ್ರ ಬಜೆಟ್‌ನಲ್ಲಿ 'ತಾರತಮ್ಯ' ಮತ್ತು ಬಂಗಾಳ ಮತ್ತು ವಿಪಕ್ಷಗಳು ಆಡಳಿತವಿರುವ ರಾಜ್ಯಗಳನ್ನು ವಿಭಜಿಸುವ ಸಂಚಿನ ವಿರುದ್ಧ ಸಭೆಯಲ್ಲಿ ಪ್ರಸ್ತಾಪಿಸುವ ಮೂಲಕ ತಮ್ಮ ಪ್ರತಿಭಟನೆ ದಾಖಲಿಸುವುದಾಗಿ ಹೇಳಿದ್ದಾರೆ.
'ನೀತಿ ಆಯೋಗದ ಸಭೆಯ ನನ್ನ ಭಾಷಣದಲ್ಲಿ ಬಂಗಾಳ ಹಾಗೂ ಇತರೆ ರಾಜ್ಯಗಳನ್ನು ವಿಭಜಿಸಲು ನಡೆಸುತ್ತಿರುವ ಸಂಚು ಜೊತೆಗೆ ವಿರೋಧ ಪಕ್ಷಗಳ ಆಡಳಿತ ರಾಜ್ಯದ ವಿರುದ್ಧದ ತಾರತಮ್ಯ ಹಾಗೂ ರಾಜಕೀಯ ಪಕ್ಷಪಾತದ ವಿರುದ್ಧ ನನ್ನ ಪ್ರತಿಭಟನೆಯನ್ನು ದಾಖಲಿಸಲಿದ್ದೇನೆ. ಹಾಗೆ ಮಾಡಲು ಸಾಧ್ಯವಾಗದಿದ್ದರೆ ಸಭೆಯಿಂದ ಹೊರನಡೆಯುತ್ತೇನೆ' ಎಂದು ಹೇಳಿದ್ದಾರೆ.
ಈ ಮೊದಲು ಗುರುವಾರ ದೆಹಲಿಗೆ ತೆರಳಬೇಕಾಗಿದ್ದ ಮಮತಾ, ತಮ್ಮ ಪ್ರವಾಸವನ್ನು ಒಂದು ದಿನ ಮುಂದೂಡಿದ್ದರು.
ಕೇಂದ್ರ ಬಜೆಟ್‌ನಲ್ಲಿ 'ಇಂಡಿಯಾ' ಮೈತ್ರಿಕೂಟದ ಆಡಳಿತವಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಮುಖ್ಯಮಂತ್ರಿಗಳು ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿವೆ.