ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತೀಯ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಭ ಹಾರೈಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, 'ಪ್ರತಿಯೊಬ್ಬ ಕ್ರೀಡಾಪಟುವೂ ಭಾರತದ ಹೆಮ್ಮೆ' ಎಂದು ಹೇಳಿದ್ದಾರೆ.
'ಪ್ಯಾರಿಸ್ ಒಲಿಂಪಿಕ್ಸ್ ಪ್ರಾರಂಭವಾಗಿದೆ. ಭಾರತೀಯ ತಂಡಕ್ಕೆ ನನ್ನ ಶುಭಾಶಯಗಳು. ಪ್ರತಿಯೊಬ್ಬ ಅಥ್ಲೀಟ್‌ಗಳು ಭಾರತದ ಹೆಮ್ಮೆ. ಅವರೆಲ್ಲರೂ ತಮ್ಮ ಅಸಾಧಾರಣ ಪ್ರದರ್ಶನಗಳಿಂದ ನಮಗೆ ಸ್ಪೂರ್ತಿಯಾಗಲಿ. ಕ್ರೀಡಾ ಮನೋಭಾವದ ನಿಜವಾದ ಸ್ಪೂರ್ತಿಯನ್ನು ಬೆಳಗಿಸಲಿ' ಎಂದು ಹಾರೈಸಿದ್ದಾರೆ.
ಶುಭ ಹಾರೈಸಿದ ಕಾಂಗ್ರೆಸ್:
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತೀಯ ಕ್ರೀಡಾಪಟುಗಳಿಗೆ ಕಾಂಗ್ರೆಸ್ ಶುಭಾಶಯ ಕೋರಿದೆ. ತಮ್ಮ ದೇಶಕ್ಕೆ ಕೀರ್ತಿ ತರುವಂತೆ ಮತ್ತು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವ ನೆನಪುಗಳನ್ನು ಸೃಷ್ಟಿಸುವಂತೆ ಹಾರೈಸಿದೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪರವಾಗಿ ಅದ್ಭುತ ಪ್ರತಿಭೆಗಳಾದ ಭಾರತೀಯ ಅಥ್ಲೀಟ್‌ಗಳಿಗೆ ಶುಭ ಹಾರೈಸುವೆ' ಎಂದು ಹೇಳಿದ್ದಾರೆ.
'ನಿಮ್ಮ ಸಮರ್ಪಣೆ, ಪರಿಶ್ರಮ ಮತ್ತು ಉತ್ಸಾಹವು ನಿಮ್ಮನ್ನು ಈ ಜಾಗತಿಕ ಹಂತಕ್ಕೆ ತಂದಿದೆ. ನಿಮ್ಮ ಪ್ರದರ್ಶನದಿಂದ ಭಾರತವನ್ನು ಹೆಮ್ಮೆಪಡುವಂತೆ ಮಾಡಿ. ನಿಮ್ಮ ಉತ್ಸಾಹವು ತ್ರಿವರ್ಣ ಧ್ವಜದಷ್ಟು ಎತ್ತರಕ್ಕೆ ಏರಲಿ' ಎಂದು ಖರ್ಗೆ ಹಾರೈಸಿದ್ದಾರೆ.
ಜಾಗತಿಕ ಕ್ರೀಡಾಹಬ್ಬ 33ನೇ ಒಲಿಂಪಿಕ್‌ಗೆ ಬೆಳಕಿನ ನಗರಿ ಪ್ಯಾರಿಸ್‌ನಲ್ಲಿ ಶುಕ್ರವಾರ ಅದ್ಧೂರಿ ಚಾಲನೆ ದೊರಕಿದೆ. ಈ ಕ್ರೀಡಾಕೂಟದಲ್ಲಿ 47 ಮಹಿಳೆಯರು ಸೇರಿದಂತೆ 117 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಿದ್ದಾರೆ.