ಇಸ್ಲಾಮಾಬಾದ್: ಮರಣದಂಡನೆಗೆ ಗುರಿಯಾಗಿದ್ದ 6 ಮಂದಿ ಸೇರಿ ಕನಿಷ್ಠ 18 ಘಾತಕ ಅಪರಾಧಿಗಳು ಕಾವಲುಗಾರನ ಮೇಲೆ ಹಲ್ಲೆ ನಡೆಸಿ ಜೈಲಿನಿಂದ ಪರಾರಿಯಾದ ಘಟನೆ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ನಡೆದಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ರಾವಲಕೋಟ್ ಜೈಲಿನಲ್ಲಿ ಅಪರಾಧಿಯೊಬ್ಬ ಜೈಲು ಕಾವಲುಗಾರನಿಗೆ ಬಂದೂಕು ತೋರಿಸಿ ಜೈಲಿನ ಕೀ ಪಡೆದುಕೊಂಡು ಪರಾರಿಯಾಗಿದ್ದಾನೆ. ಶುಕ್ರವಾರ ಈ ಘಟನೆ ನಡೆದಿದೆ.
18 ಕೈದಿಗಳ ಪೈಕಿ ಆರು ಮಂದಿ ಮರಣದಂಡನೆಗೆ ಗುರಿಯಾಗಿದ್ದರು. ಮೂವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ತಪ್ಪಿಸಿಕೊಳ್ಳುತ್ತಿದ್ದ ವೇಳೆ ಪೊಲೀಸರು ಹಾರಿಸಿದ ಗುಂಡಿಗೆ ಓರ್ವ ಕೈದಿ ಹತನಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರಾರಿಯಾದ ಕೈದಿಗಳಿಗಾಗಿ ಈ ಪ್ರದೇಶದಲ್ಲಿ ಪೊಲೀಸರು ಭಾರಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಘಟನೆಯ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಜೈಲಿನ ಮುಖ್ಯಾಧಿಕಾರಿ ಮತ್ತು ಇತರ ಕೆಲವು ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಅಲ್ಲದೇ ಜೈಲಿನ ಡೆಪ್ಯುಟಿ ಸೂಪರಿಂಟೆಂಡೆಂಟ್ ಸೇರಿದಂತೆ 7 ಮಂದಿ ಅಧಿಕಾರಿಗಳನ್ನು ವಿಚಾರಣೆಗಾಗಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಭದ್ರತಾ ಲೋಪ ಹಿನ್ನೆಲೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ಯಾದ್ಯಂತ ಎಲ್ಲಾ ಜೈಲುಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.