ನವದೆಹಲಿ: ಅನಪೇಕ್ಷಿತ ಪ್ರಾಯೋಜಿತ ಕರೆಗಳು, ಸಂದೇಶಗಳಿಗೆ ಕಡಿವಾಣ ಹಾಕಲು ರಚಿಸಲಾಗುತ್ತಿರುವ ಮಾರ್ಗಸೂಚಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಸಲಹೆಗಳನ್ನು ಸಲ್ಲಿಸಲು ನೀಡಿದ್ದ ಅವಕಾಶವನ್ನು ಆ. 8ರವರೆಗೂ ಮುಂದೂಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಆಹಾರ ಮತ್ತು ನಾಗರಿಕ ವ್ಯವಹಾರಗಳ ಸಚಿವಾಲಯವು ಈ ಕುರಿತು ಹೇಳಿಕೆ ನೀಡಿದ್ದು, ಬಹಳಷ್ಟು ಒಕ್ಕೂಟಗಳು, ಸಂಘಟನೆಗಳು ಹಾಗೂ ಇನ್ನಿತರ ಸಂಸ್ಥೆಗಳು ಪ್ರತಿಕ್ರಿಯಿಸಲು ಮತ್ತಷ್ಟು ಕಾಲಾವಕಾಶ ಕೇಳಿದ್ದರಿಂದಾಗಿ ಸಲಹೆ ಸ್ವೀಕರಿಸುವ ಸಮಯವನ್ನು ಇನ್ನಷ್ಟು ವಿಸ್ತರಿಸಲಾಗಿದೆ ಎಂದಿದೆ.
'ಈವರೆಗೂ ಬಹಳಷ್ಟು ಸಲಹೆಗಳು ಹಾಗೂ ಪ್ರತಿಕ್ರಿಯೆಯನ್ನು ಸ್ವೀಕರಿಸಲಾಗಿದೆ. ಅವುಗಳು ಪರಿಶೀಲನೆ ಹಂತದಲ್ಲಿದೆ. ಅನಪೇಕ್ಷಿತ ಕರೆ ಹಾಗೂ ಸಂದೇಶಗಳ ನಿಯಂತ್ರಣಕ್ಕೆ ದೂರಸಂಪರ್ಕ ಕಂಪನಿಗಳು ಹಾಗೂ ನಿಯಂತ್ರಣ ಪ್ರಾಧಿಕಾರಗಳ ಜತೆ ಚರ್ಚೆ ನಡೆಯುತ್ತಿದೆ' ಎಂದು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಕರಡು ಮಾರ್ಗಸೂಚಿಯ ಪ್ರಮುಖ ಅಂಶಗಳು
ದೂರಸಂಪರ್ಕ ಮೂಲಕ ಸಂವಹನ ಪ್ರಕ್ರಿಯೆಯಲ್ಲಿ ತೊಡಗುವ ಪ್ರತಿಯೊಬ್ಬರಿಗೂ ಈ ಮಾರ್ಗಸೂಚಿ ಅನ್ವಯಿಸಲಿದೆ. ಕರೆ ಅಥವಾ ಸಂದೇಶ ಸ್ವೀಕರಿಸುವವರ ಒಪ್ಪಿಗೆ ಸಿಗದಿದ್ದರೆ ಅಂಥವುಗಳನ್ನು ಅನಪೇಕ್ಷಿತ ಎಂದು ಪರಿಗಣಿಸಲಾಗುವುದು. ವಾಣಿಜ್ಯ ಸಂದೇಶಗಳು ಟೆಲಿಕಾಂ ನಿಯಂತ್ರಕ ಟ್ರಾಯ್‌ನ ನಿಯಮಗಳನ್ನು ಉಲ್ಲಂಘಿಸುವಂತಿದ್ದರೆ ಅಂಥವುಗಳ ನಿಷೇಧ ಕ್ರಮವೂ ಒಳಗೊಂಡಿದೆ.
ಟ್ರಾಯ್‌ನ 2018ರ ಮಾರ್ಗಸೂಚಿ ಅನ್ವಯ ನೋಂದಾಯಿತ ಟೆಲಿಮಾರ್ಕೆಟಿಂಗ್‌ನಲ್ಲಿರುವವರನ್ನು ಹೊರತುಪಡಿಸಿ, ಯಾವುದೇ ಉದ್ದಿಮೆಯವರು ಖಾಸಗಿ ಸಂಖ್ಯೆಗಳ ಮೂಲಕ ಸಂದೇಶಗಳನ್ನು ಕಳುಹಿಸಿದರೆ, ಅಂಥವುಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಕ್ರಮ ಕೈಗೊಳ್ಳುವುದನ್ನೂ ಒಳಗೊಂಡಿದೆ.
'ಡು ನಾಟ್ ಡಿಸ್ಟರ್ಬ್' ಎಂಬ ಆಯ್ಕೆಯು ಈವರೆಗೂ ನೋಂದಾಯಿತ ಟೆಲಿಮಾರ್ಕೆಟ್ ಮಾಡುವವರಿಗೆ ಮಾತ್ರ ಅನ್ವಯಿಸುತ್ತಿದೆ. ನೋಂದಣಿಯಾಗದ ಮಾರ್ಕೆಟರ್‌ಗಳ ತಪಾಸಣೆಯೇ ನಡೆಯುತ್ತಿಲ್ಲ. ಆದರೆ ಇಂಥವುಗಳನ್ನು ಪತ್ತೆ ಮಾಡಿ ಅವುಗಳನ್ನು ನಿಯಂತ್ರಿಸುವ ಕ್ರಮವನ್ನು ಹೊಸ ಮಾರ್ಗಸೂಚಿಯಲ್ಲಿ ನಮೂದಿಸುವ ಕುರಿತು ಚರ್ಚೆಗಳು ನಡೆದಿವೆ ಎಂದು ಸಚಿವಾಲಯ ಹೇಳಿದೆ.