HEALTH TIPS

ಬಜೆಟ್ ಅಧಿವೇಶನಕ್ಕೂ ಮುನ್ನ ಸರ್ವಪಕ್ಷಗಳ ಸಭೆ, TMC ಗೈರು

          ವದೆಹಲಿ: ಕೇಂದ್ರ ಬಜೆಟ್ ಅಧಿವೇಶನಕ್ಕೆ ಒಂದು ದಿನ ಮೊದಲು (ಜುಲೈ 21, ಭಾನುವಾರ) ನಡೆಯಲಿರುವ ಸರ್ವಪಕ್ಷಗಳ ಸಭೆಗೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದೀಯ ಪಕ್ಷದ ನಾಯಕರು ಗೈರಾಗಲಿದ್ದಾರೆ.

         ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಅವರು ಲೋಕಸಭೆ ವಿರೋಧ ಪಕ್ಷದ ನಾಯಕನಾದ ಬಳಿಕ ನಡೆಯುತ್ತಿರುವ ಮೊದಲ ಸರ್ವಪಕ್ಷಗಳ ಸಭೆ ಇದಾಗಿದೆ.

              ಅವರು ತಮ್ಮ ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರೂ ರಾಹುಲ್‌ ಜೊತೆ ಹಾಜರಾಗಲಿದ್ದಾರೆ.

                 ಜುಲೈ 22ರಂದು ಬಜೆಟ್‌ ಅಧಿವೇಶನ ಆರಂಭವಾಗಲಿದೆ. ನೀಟ್‌ ಹಾಗೂ ಇತರ ಪರೀಕ್ಷೆ ಹಗರಣಗಳು, ಜಮ್ಮು ಮತ್ತು ಕಾಶ್ಮೀರದಲ್ಲಿನ ಉಗ್ರರ ದಾಳಿ, ಮಣಿಪುರ ಹಿಂಸಾಚಾರ, ಬೆಲೆ ಏರಿಕೆ, ನಿರುದ್ಯೋಗ ವಿಚಾರಗಳ ಚರ್ಚೆಗೆ ಪಟ್ಟು ಹಿಡಿದಿರುವ ವಿರೋಧ ಪಕ್ಷಗಳು ಸಭೆಯಲ್ಲಿ ಒತ್ತಾಯ ಮಾಡುವ ಸಾಧ್ಯತೆ ಇದೆ.

                ಬಜೆಟ್‌ ಮಂಡನೆ ಹಾಗೂ ಚರ್ಚೆ ನಂತರ, ‌ಮಸೂದೆ ಮಂಡನೆ, ಅನುಮೋದನೆಯಂತಹ ಪ್ರಕ್ರಿಯೆಗಳಷ್ಟೇ ಅಲ್ಲದೆ, ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಯಬೇಕೆಂದು ವಿರೋಧ ಪಕ್ಷಗಳು ಬಯಸುತ್ತಿರುವುದಾಗಿ ಮೂಲಗಳು ತಿಳಿಸಿವೆ.

              ನೀಟ್‌ ವಿಚಾರ, ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆ ಆಗಬೇಕು ಎಂದು ಸಂಸತ್ತಿನ ಮೊದಲ ಅಧಿವೇಶನದಲ್ಲೇ ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಆದರೂ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ, ಭಾರಿ ಪ್ರತಿಭಟನೆ ನಡೆಸಿದ್ದವು. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಪ್ರಧಾನಿ ಮೋದಿ ಅವರು ಮಾತನಾಡುವಾಗ ಘೋಷಣೆಗಳನ್ನು ಕೂಗಿ, ಸದನದಿಂದ ಹೊರನಡೆದಿದ್ದವು.

ರಿಜಿಜುಗೆ ಡೆರೆಕ್ ಪತ್ರ
           ರಾಜ್ಯಸಭೆಯಲ್ಲಿ ಟಿಎಂಸಿ ನಾಯಕರಾಗಿರುವ ಸಂಸದ ಡೆರೆಕ್ ಒಬ್ರಿಯಾನ್ ಅವರು ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರಿಗೆ ಪತ್ರ ಬರೆದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 'ಹುತಾತ್ಮರ ದಿನ' ಇರುವುದರಿಂದ ಟಿಎಂಸಿಯ ಯಾವ ಸಂಸದರೂ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

               ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷವು 1993ರ ಜುಲೈ 21ರಂದು ಅಂದಿನ ಸಿಪಿಐ(ಎಂ) ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿತ್ತು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದ ವೇಳೆ 13 ಮಂದಿ ಮೃತಪಟ್ಟಿದ್ದರು. ಅವರ ಸ್ಮರಣಾರ್ಥ ಪ್ರತಿವರ್ಷ ಪಶ್ಚಿಮ ಬಂಗಾಳದಲ್ಲಿ ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ.

              ನಂತರದ ದಿನಗಳಲ್ಲಿ ಕಾಂಗ್ರೆಸ್‌ ರಾಜ್ಯ ನಾಯಕತ್ವದ ವಿರುದ್ಧ ಬಂಡಾಯ ಸಾರಿದ್ದ ಮಮತಾ, 1998ರಲ್ಲಿ ಟಿಎಂಸಿ ಸ್ಥಾಪಿಸಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries