ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ 2024-25ನೇ ಸಾಲಿನ ಕೇಂದ್ರ ಸಾಮಾನ್ಯ ಬಜೆಟ್ ಮಂಡನೆಯಾಗಲಿದೆ. ಈ ಸಂದರ್ಭದಲ್ಲಿ ಯಾವ ರಾಜ್ಯಕ್ಕೆ ಎಷ್ಟು ಅನುದಾನ ಸಿಗಲಿದೆ, ಯಾವುದಕ್ಕೆ ಪ್ರಾಶಸ್ತ್ಯ ನೀಡಲಿದೆ ಎಂಬಿತ್ಯಾದಿ ಚರ್ಚೆಯಾಗುತ್ತಿದೆ. ವಿಶೇಷ ವರ್ಗದ ಸ್ಥಾನಮಾನಕ್ಕೆ ಬೇಡಿಕೆಗಳ ಮಧ್ಯೆ, ಆರ್ಥಿಕ ಬೆಳವಣಿಗೆಯಲ್ಲಿ ಸೂಚ್ಯಂಕದ ಕೊರತೆ ಎದುರಿಸುತ್ತಿರುವ ಸುಮಾರು ಆರು ರಾಜ್ಯಗಳಿಗೆ ವಿಶೇಷ ಆರ್ಥಿಕ ಅನುದಾನವನ್ನು ನೀಡುವ ಬಗ್ಗೆ ಕೇಂದ್ರದ ಎನ್‌ಡಿಎ ಸರ್ಕಾರ ಪರಿಗಣಿಸಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಕ್ಷೇತ್ರವಾರು ಬೆಳವಣಿಗೆಗಳಿಗೆ ಮುಂಬರುವ ಬಜೆಟ್‌ನಲ್ಲಿ ಕ್ರೋಢೀಕೃತ ವಿಶೇಷ ಆರ್ಥಿಕ ಅನುದಾನವನ್ನು ಪಡೆಯಬಹುದಾದ ಆರು ರಾಜ್ಯಗಳಲ್ಲಿ ಬಿಹಾರ ಕೂಡ ಒಂದು. ಅಂತಹ ಅನುದಾನವನ್ನು ಪಡೆಯುವ ಇತರ ರಾಜ್ಯಗಳಲ್ಲಿ ಆಂಧ್ರ ಪ್ರದೇಶ, ಜಾರ್ಖಂಡ್, ಛತ್ತೀಸ್‌ಗಢ ಮತ್ತು ಒಡಿಶಾ ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರ ಸೇರಿವೆ ಎಂದು ಹೇಳಿದರು.
ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಾಲುದಾರರಲ್ಲಿ ಒಂದಾಗಿರುವ ಜೆಡಿಯು ಬಿಹಾರಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಒತ್ತಾಯಿಸುತ್ತಿದ್ದು, ಮುಂದಿನ ವರ್ಷ ಅಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ನಿನ್ನೆ ದೆಹಲಿಗೆ ಭೇಟಿ ನೀಡಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ತಮ್ಮ ರಾಜ್ಯಕ್ಕೆ ಕೆಲವು ಬೃಹತ್ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಲು ವಿಶೇಷ ಆರ್ಥಿಕ ಅನುದಾನಕ್ಕಾಗಿ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ನೀತಿ ಆಯೋಗವು ಕೆಲವು ಮಾನದಂಡಗಳನ್ನು ನಿಗದಿಪಡಿಸಿದ ನಂತರ ಯಾವುದೇ ರಾಜ್ಯಕ್ಕೆ ವಿಶೇಷ ಸ್ಥಾನಮಾನವು ಈಗ ಕಾರ್ಯಸಾಧ್ಯವಲ್ಲ. ಆದರೆ, ಕೇಂದ್ರದ NDA 3.0 ಸರ್ಕಾರವು ಬಿಹಾರ ಅಥವಾ ಆಂಧ್ರಪ್ರದೇಶ ಮಾತ್ರವಲ್ಲ ಎಲ್ಲಾ ರಾಜ್ಯಗಳ ಅಭಿವೃದ್ಧಿಗೆ ಬದ್ಧವಾಗಿರಬೇಕಾಗುತ್ತದೆ. ಮುಂಬರುವ ಬಜೆಟ್‌ನಲ್ಲಿ 5-6 ರಾಜ್ಯಗಳಿಗೆ ವಿಶೇಷ ಆರ್ಥಿಕ ಅನುದಾನ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರವು ಬಜೆಟ್‌ನಲ್ಲಿ ಪ್ರತಿ ರಾಜ್ಯದಿಂದ ಸಲಹೆಗಳನ್ನು ಕೇಳಿದೆ. ಇದರ ಭಾಗವಾಗಿ, ಕೆಲವು ರಾಜ್ಯಗಳು ವಿಶೇಷ ಆರ್ಥಿಕ ಬೆಂಬಲಕ್ಕಾಗಿ ಬೇಡಿಕೆ ಮುಂದಿಟ್ಟಿವೆ. ಈ ವರ್ಷ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಜಮ್ಮು-ಕಾಶ್ಮೀರ ತನ್ನ ಸರ್ವತೋಮುಖ ಅಭಿವೃದ್ಧಿಗೆ ಏಕೀಕೃತ ಆರ್ಥಿಕ ಪ್ಯಾಕೇಜ್ ನ್ನು ಸಹ ಪಡೆಯಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಶೇಷ ಸ್ಥಾನಮಾನದ ರೂಪದಲ್ಲಿ ವಿಶೇಷ ಆರ್ಥಿಕ ಬೆಂಬಲಕ್ಕಾಗಿ ಬೇಡಿಕೆಯಿಡುತ್ತಿರುವ ಬಿಹಾರ ಮತ್ತು ಆಂಧ್ರದಂತಹ ಇತರ ರಾಜ್ಯಗಳು ರಸ್ತೆ, ಕೈಗಾರಿಕೆ, ವಿದ್ಯುತ್, ಉದ್ಯೋಗ ಮತ್ತು ಕೃಷಿಯಂತಹ ವಲಯವಾರು ಅಭಿವೃದ್ಧಿಗೆ ಬಲವಾದ ಆರ್ಥಿಕ ಅನುದಾನವನ್ನು ಪಡೆಯಬಹುದು ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಮಾರ್ಗಸೂಚಿಗಳ ಅಡಿಯಲ್ಲಿ ವಿಶೇಷ ಸ್ಥಾನಮಾನದ ಔಪಚಾರಿಕ ಅಂಗೀಕಾರವು ಕಾರ್ಯಸಾಧ್ಯವಾಗದಿದ್ದರೂ, ಸನ್ನಿಹಿತ ಬಜೆಟ್‌ನಲ್ಲಿ ಐದು ಅಥವಾ ಆರು ರಾಜ್ಯಗಳಿಗೆ ಗಣನೀಯ ಆರ್ಥಿಕ ಅನುದಾನವನ್ನು ವಿಸ್ತರಿಸುವ ಸಾಧ್ಯತೆಯಿದೆ ಎಂದು ಹೇಳಿದರು.
ಬಜೆಟ್ ನಲ್ಲಿ ಏನು ನಿರೀಕ್ಷಿಸಬಹುದು?:
ಬಿಹಾರವು ವಿಶೇಷ ವರ್ಗದ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿರುವ ಕಾರಣ, ಅದು ಕ್ರೋಢೀಕೃತ ವಿಶೇಷ ಆರ್ಥಿಕ ಅನುದಾನವನ್ನು ಪಡೆಯಬಹುದು.
ಈ ಅನುದಾನವನ್ನು ಪಡೆಯುವ ಇತರ ರಾಜ್ಯಗಳು ಆಂಧ್ರ ಪ್ರದೇಶ, ಜಾರ್ಖಂಡ್, ಛತ್ತೀಸ್‌ಗಢ, ಒಡಿಶಾ ಮತ್ತು ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಾಗಿವೆ.
ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ತಮ್ಮ ರಾಜ್ಯಕ್ಕೆ ಮೆಗಾ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಲು ವಿಶೇಷ ಆರ್ಥಿಕ ಅನುದಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನೀತಿ ಆಯೋಗ ಕೆಲವು ಮಾರ್ಗಸೂಚಿಗಳನ್ನು ರೂಪಿಸಿದ ನಂತರ ಯಾವುದೇ ರಾಜ್ಯಕ್ಕೆ ವಿಶೇಷ ಸ್ಥಾನಮಾನವು ಈಗ ಕಾರ್ಯಸಾಧ್ಯವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.