ಹೈದರಾಬಾದ್: ಕೇರಳದ ವಯನಾಡು ಜಿಲ್ಲೆಯಲ್ಲಿ ಭೂಕುಸಿತದಿಂದ ತತ್ತರಿಸಿರುವ ಸಂತ್ರಸ್ತರ ನೆರವಿಗೆ ತೆಲುಗು ನಟ ಚಿರಂಜೀವಿ ಮತ್ತು ಅವರ ಮಗ, 'ಆರ್‌ಆರ್‌ಆರ್' ಖ್ಯಾತಿಯ ರಾಮ ಚರಣ್ ₹1 ಕೋಟಿ ದೇಣಿಗೆ ನೀಡಿದ್ದಾರೆ.
ಹೈದರಾಬಾದ್: ಕೇರಳದ ವಯನಾಡು ಜಿಲ್ಲೆಯಲ್ಲಿ ಭೂಕುಸಿತದಿಂದ ತತ್ತರಿಸಿರುವ ಸಂತ್ರಸ್ತರ ನೆರವಿಗೆ ತೆಲುಗು ನಟ ಚಿರಂಜೀವಿ ಮತ್ತು ಅವರ ಮಗ, 'ಆರ್‌ಆರ್‌ಆರ್' ಖ್ಯಾತಿಯ ರಾಮ ಚರಣ್ ₹1 ಕೋಟಿ ದೇಣಿಗೆ ನೀಡಿದ್ದಾರೆ.
ಭೂಕುಸಿತದಿಂದ ನೂರಾರು ಮಂದಿ ಮೃತಪಟ್ಟಿರುವ ಕುರಿತಂತೆ ಚಿರಂಜೀವಿ ಎಕ್ಸ್ ಪೋಸ್ಟ್ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ.
'ಕಳೆದ ಕೆಲ ದಿನಗಳಿಂದ ಕೇರಳದಲ್ಲಿ ಸಂಭವಿಸಿರುವ ನೈಸರ್ಗಿಕ ವಿಕೋಪದಲ್ಲಿ ನೂರಾರು ಅಮೂಲ್ಯ ಜೀವಗಳ ಹಾನಿಯಾಗಿದೆ. ಈ ವಿನಾಶವನ್ನು ನೋಡಿ ತೀವ್ರವಾಗಿ ನೊಂದಿದ್ದೇನೆ. ವಯನಾಡು ದುರಂತ ಕಂಡು ನನ್ನ ಹೃದಯ ಮಿಡಿಯುತ್ತಿದೆ'ಎಂದು ಬರೆದುಕೊಂಡಿದ್ದಾರೆ.
'ನಾನು ಮತ್ತು ಚರಣ್ ಸೇರಿ ಸಂತ್ರಸ್ತರ ನೆರವಿಗಾಗಿ ₹1 ಕೋಟಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದೇವೆ. ನೋವಿನಲ್ಲಿರುವ ಎಲ್ಲರೂ ಶೀಘ್ರ ಚೇತರಿಸಿಕೊಳ್ಳಲೆಂದು ನಾನು ಪ್ರಾರ್ಥಿಸುತ್ತೇನೆ'ಎಂದು ಚಿರಂಜೀವಿ ಹೇಳಿದ್ದಾರೆ..
ಇಂದು ತೆಲುಗು ನಟ ಅಲ್ಲು ಅರ್ಜುನ್ ಸಹ ಸಂತ್ರಸ್ತರ ನಿಧಿಗೆ ₹25 ಲಕ್ಷ ನೆರವು ನೀಡಿದ್ದಾರೆ.
ತಮಿಳು ನಟರಾದ ಸೂರ್ಯ, ಕಾರ್ತಿ, ನಟಿಯರಾದ ಜ್ಯೋತಿಕಾ, ರಶ್ಮಿಕಾ ಮಂದಣ್ಣ ಮುಂತಾದ ತಾರೆಯರು ಸಂತ್ರಸ್ತರ ನೆರವಿಗೆ ದೇಣಿಗೆ ನೀಡಿದ್ದಾರೆ.
ಭೂಕುಸಿತ ಸಂಭವಿಸಿರುವ ವಯನಾಡು ಜಿಲ್ಲೆಯಲ್ಲಿ ಸತತ 6ನೇ ದಿನವೂ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಮೃತರ ಸಂಖ್ಯೆ 350 ದಾಟಿದೆ.