ಕಣ್ಣೂರು: ತಾಡಿಕ್ಕಡವ್ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಆಹಾರ ವಿಷಬಾಧೆಯುಂಟಾಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 100 ಜನರಿಗೆ ಆಹಾರ ವಿಷವಾಗಿದೆ ಎಂದು ಶಂಕಿಸಲಾಗಿದೆ. ನಿನ್ನೆ ರಾತ್ರಿ ಶಿಕ್ಷಕರು ಹಾಗೂ ಮಕ್ಕಳಿಗೆ ವಾಂತಿ, ಹೊಟ್ಟೆನೋವು ಕಾಣಿಸಿಕೊಂಡಿದೆ. ನಿನ್ನೆ ಮಧ್ಯಾಹ್ನದ ಊಟದ ಜೊತೆ ನೀಡಿದ ಚಿಕನ್ ಕರಿಯಿಂದ ವಿಷಾಹಾರವಾಗಿದೆ ಎಂದು ದೂರಲಾಗಿದೆ. ಆಹಾರ ಸೇವಿಸಿದ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿಯಾಗಿದೆ ಎಂದು ವರದಿಯಾಗಿದೆ.
ಚಿಕನ್ ಕರಿಯಿಂದ ಆಹಾರ ವಿಷ ಸಂಭವಿಸಿದೆ ಎಂಬುದು ಪ್ರಾಥಮಿಕ ತೀರ್ಮಾನ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ ಸುಮಾರು 700 ಜನರು ನಿನ್ನೆ ಶಾಲೆಯಿಂದ ಊಟ ಸೇವಿಸಿದ್ದರು. ಇವರಲ್ಲಿ ಸುಮಾರು 100 ಮಂದಿಗೆ ರಾತ್ರಿ ವಾಂತಿ, ಹೊಟ್ಟೆನೋವು ಕಾಣಿಸಿಕೊಂಡಿತು. ದೈಹಿಕ ಅಸ್ವಸ್ಥತೆಯನ್ನು ಅನುಭವಿಸಿದ ಎಲ್ಲರೂ ತಕ್ಷಣವೇ ಕರುವಾಂಚಲ್‍ನ ಖಾಸಗಿ ಆಸ್ಪತ್ರೆಗಳು ಮತ್ತು ಇತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.