ಢಾಕಾ: ಉದ್ಯೋಗ ಮೀಸಲಾತಿ ಸಂಬಂಧ ಶುರುವಾದ ಪ್ರತಿಭಟನೆಯು ಹಿಂಸಾರೂಪಾ ತಾಳಿದ್ದು, ದೇಶದಲ್ಲಿ ಸೃಷ್ಟಿಯಾದ ಅರಾಜಕತೆಗೆ ಬೆದರಿದ ಶೇಖ್ ಹಸೀನಾ ಸೋಮವಾರ (ಆಗಸ್ಟ್ 05) ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದಾರೆ. ಇತ್ತ ಶೇಖ್ ಹಸೀನಾ ಅವರು ದೇಶ ತೊರೆದ ನಂತರ ಹಿಂಸಾಚಾರ ಮತ್ತಷ್ಟು ಭುಗಿಲೆದಿದ್ದು, 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ತೊರೆದಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಅವರ ನಿವಾಸಕ್ಕೆ ಮುತ್ತಿಗೆ ಹಾಕಿದ ಸಾವಿರಾರು ಪ್ರತಿಭಟನಾ ನಿರತರು ಮನೆಯನ್ನು ಧ್ವಂಸ ಮಾಡಿದ್ದು, ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇದಲ್ಲದೆ ಶೇಖ್ ಹಸೀನಾ ಅವರ ಪಕ್ಷ ಅವಾಮಿ ಲೀಗ್ ಕಚೇರಿ, ನಾಯಕರ ನಿವಾಸಕ್ಕೆ ಮುತ್ತಿಗೆ ಹಾಕಿರುವ ಪ್ರತಿಭಟನಾ ನಿರತರು ಅವರ ಮನೆಗಳಲ್ಲಿರುವ ವಸ್ತುಗಳನ್ನು ಕೊಳ್ಳೆ ಹೊಡೆದಿದ್ದಾರೆ.
ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಹಿಂಸಾಚಾರ, ಹಿಂದೂ ದೇವಾಲಯಗಳ ಮೇಲಿನ ದಾಳಿ, ರಾಜಧಾನಿ ಢಾಕಾ ಮತ್ತು ಇತರ ಹಲವಾರು ಸ್ಥಳಗಳಲ್ಲಿ ನಡೆಸಿದ ಲೂಟಿ, ಗಲಾಟೆ ವೇಳೆ 119 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದು ಶೇಖ್ ಹಸೀನಾ ಅವರು ದೇಶ ತೊರೆದ ಬಳಿಕ ಈ ಬೆಳವಣಿಗೆ ಮಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಉದ್ಯೋಗ ಮೀಸಲಾತಿಯನ್ನು ವಿರೋಧಿಸಿ ಕರೆ ನೀಡಿದ್ದ ಪ್ರತಿಭಟನೆ ಬಳಿಕ ಹಿಂಸಾರೂಪಕ್ಕೆ ತಿರುಗಿತ್ತು. ಘಟನೆಯಲ್ಲಿ ಅನೇಕ ಸಾವು ನೋವುಗಳು ಸಂಭವಿಸಿತ್ತು. ದೇಶದಲ್ಲಿ ಮಿಲಿಟರಿ ಆಡಳಿತ ಹೇರಲಾಗಿದ್ದು, ಅನಿರ್ದಾಷ್ಟಾವಧಿ ಕರ್ಫ್ಯೂ ವಿಧಿಸಲಾಗಿದೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ದೇಶ ಸಹಜ ಸ್ಥಿತಿಗೆ ಮರಳುತ್ತಿದ್ದು, ಎಂದಿನಂತೆ ಸಾರ್ವಜನಿಕ ಸಾರಿಗೆ ಹಾಗೂ ಸರ್ಕಾರಿ ಕಚೇರಿಗಳು ಕೆಲಸ ಮಾಡುತ್ತಿವೆ. ಪೊಲೀಸರು ಹಾಗೂ ಮಿಲಿಟರಿ ಅಧಿಕಾರಿಗಳು ಭದ್ರತೆಯನ್ನು ಹೆಚ್ಚಿಸಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರಾತ ಕ್ರಮ ವಹಿಸಿದ್ದಾರೆ.