ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟದಿಂದ ಉಂಟಾಗಿರುವ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ನಾಪತ್ತೆಯಾಗಿರುವ 40 ಮಂದಿಯ ರಕ್ಷಣೆಗೆ ಕಾರ್ಯಾಚರಣೆ ಭಾನುವಾರವೂ ಮುಂದುವರಿದಿದೆ.
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟದಿಂದ ಉಂಟಾಗಿರುವ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ನಾಪತ್ತೆಯಾಗಿರುವ 40 ಮಂದಿಯ ರಕ್ಷಣೆಗೆ ಕಾರ್ಯಾಚರಣೆ ಭಾನುವಾರವೂ ಮುಂದುವರಿದಿದೆ.
ಮಂಡಿ ಜಿಲ್ಲೆಯಲ್ಲಿ ಪಧಾರ್ ಪ್ರದೇಶದ ರಾಜಭಾನ್ ಗ್ರಾಮದಲ್ಲಿ ಇನ್ನೆರಡು ಮೃತದೇಹಗಳು ಪತ್ತೆಯಾಗಿವೆ.
ಹಿಮಾಚಲ ಪ್ರದೇಶದಲ್ಲಿನ ಮೇಘಸ್ಫೋಟ ಹಾಗೂ ಪ್ರವಾಹದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನದಿಗಳ ನೀರಿನ ಮಟ್ಟ ಅಪಾಯಕರ ರೀತಿಯಲ್ಲಿ ಏರಿಕೆಯಾಗಿದೆ.
ರಾಜ್ಯದ ಕುಲ್ಲು, ಮಂಡಿ ಹಾಗೂ ಶಿಮ್ಲಾ ಜಿಲ್ಲೆಗಳಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ಹಲವು ಮನೆಗಳು, ಸೇತುವೆಗಳು ಕೊಚ್ಚಿ ಹೋಗಿವೆ. ಈ ಜಿಲ್ಲೆಗಳಲ್ಲಿನ ರಸ್ತೆ ಸಂಪರ್ಕವು ಕಡಿತಗೊಂಡಿದ್ದು, ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸೇರಿದಂತೆ ಒಟ್ಟು 410 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದು, ಕಾಣೆಯಾದವರ ಪತ್ತೆಗಾಗಿ ಡ್ರೋನ್‌ಗಳನ್ನು ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತರಿಗೆ ₹50,000 ತಕ್ಷಣದ ಪರಿಹಾರವನ್ನು ಘೋಷಿಸಲಾಗಿದೆ. ಮುಂದಿನ ಮೂರು ತಿಂಗಳ ಅವಧಿಗೆ ಅಡುಗೆ ಅನಿಲ, ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಜತೆಗೆ ಮಾಸಿಕ ₹5,000 ಸಹಾಯಧನ ನೀಡಲಾಗುವುದು ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.