ಶಿಮ್ಲಾ: ಹಿಮಾಚಲ ಪ್ರದೇಶ ರಾಜ್ಯದ ಮೂರು ಜಿಲ್ಲೆಗಳಲ್ಲಿ ಮೇಘಸ್ಫೋಟದಿಂದ ಉಂಟಾದ ದಿಢೀರ್ ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆಯು 13ಕ್ಕೆ ಏರಿಕೆ ಆಗಿದೆ. ಮಂಡಿ ಜಿಲ್ಲೆಯಲ್ಲಿ ಇಬ್ಬರ ಮೃತದೇಹಗಳು ಸಿಕ್ಕಿವೆ.
40ಕ್ಕೂ ಹೆಚ್ಚು ಮಂದಿ ಇನ್ನೂ ಪತ್ತೆಯಾಗಿಲ್ಲ. ಭಾನುವಾರ ಪತ್ತೆಯಾದ ಮೃತದೇಹಗಳಲ್ಲಿ ಮೂರು ತಿಂಗಳ ಹಸುಳೆ ಮಾನ್ವಿಯ ಮೃತದೇಹವೂ ಸೇರಿದೆ.
ನಾಪತ್ತೆಯಾಗಿರುವವರನ್ನು ಪತ್ತೆ ಮಾಡಲು ಡ್ರೋನ್, ಶ್ವಾನದಳ ಬಳಸಿ ಭಾನುವಾರವೂ ಕಾರ್ಯಾಚರಣೆ ಮುಂದುವರಿದಿದೆ. ಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಐಟಿಬಿಪಿ ಸೇರಿದಂತೆ ವಿವಿಧ ಏಜೆನ್ಸಿಗಳ ಒಟ್ಟು 410 ಮಂದಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧ: ಶ್ರೀನಗರ (ಪ್ರಜಾವಾಣಿ ವರದಿ): ಮೇಘಸ್ಫೋಟದ ನಂತರ ಅಲ್ಲಲ್ಲಿ ಮಣ್ಣು ಕುಸಿತ ಆಗಿರುವುದರಿಂದ ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಮಧ್ಯ ಕಾಶ್ಮೀರದ ಗಂದೇರ್‌ಬಲ್ ಪ್ರದೇಶದ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಮಣ್ಣು ಕುಸಿತ ಉಂಟಾಗಿದೆ ಎಂದಿದ್ದಾರೆ.
'ರಸ್ತೆಯಲ್ಲಿನ ವಾಹನಗಳನ್ನು ತೆರವುಗೊಳಿಸುವುದು ನಮ್ಮ ಆದ್ಯತೆ. ಮಣ್ಣು ಕುಸಿತದಿಂದಾಗಿ ತೊಂದರೆಗೆ ಸಿಲುಕಿರುವ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲಾಡಳಿತದ ಸಿಬ್ಬಂದಿ, ಪೊಲೀಸರು, ಖಾಸಗಿ ಸಂಸ್ಥೆಗಳವರು ಈ ಕೆಲಸಗಳಿಗೆ ಕೈಜೋಡಿಸಿದ್ದಾರೆ. ಲೇಹ್-ಲಡಾಖ್ ಪ್ರವಾಸ ಕೈಗೊಂಡಿರುವವರು ಹಾಗೂ ಅಮರನಾಥ ಯಾತ್ರೆಗೆ ಬಂದಿರುವವರು ಮುಂದಿನ ಆದೇಶದವರೆಗೆ ಕಾಯಬೇಕಿದೆ' ಎಂದು ಗಂದೇರ್‌ಬಲ್‌ನ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಗುಲ್ಜಾರ್ ಅಹಮದ್ ಮಾಹಿತಿ ನೀಡಿದ್ದಾರೆ.