HEALTH TIPS

ವಯನಾಡ್‌: ಇನ್ನೂ 138 ಮಂದಿ ನಾಪತ್ತೆ

 ಯನಾಡ್, ಕೇರಳ: ಧಾರಾಕಾರ ಮಳೆ ಸುರಿದಿದ್ದರಿಂದ ಸಂಭವಿಸಿದ ಹಲವು ಭೂಕುಸಿತಗಳು ಮತ್ತು ಪ್ರವಾಹದಿಂದ ತತ್ತರಿಸಿರುವ ವಯನಾಡ್‌ನ ಗ್ರಾಮಗಳಿಂದ 138 ಮಂದಿ ನಾಪತ್ತೆಯಾಗಿದ್ದಾರೆ. ಜಿಲ್ಲಾಡಳಿತವು ಈ ಸಂಬಂಧ ಅಧಿಕೃತವಾಗಿ ಕರಡುಪಟ್ಟಿ ಪ್ರಕಟಿಸಿದೆ.

ಚೂರಲ್‌ಮಲ ಮತ್ತು ಮುಂಡಕ್ಕೈ ಸೇರಿದಂತೆ ಭೂಕುಸಿತದಿಂದ ತೀವ್ರ ಬಾಧಿತವಾಗಿರುವ ಗ್ರಾಮಗಳಲ್ಲಿ ಮೃತಪಟ್ಟವರ ಸಂಖ್ಯೆ 226ಕ್ಕೆ ಏರಿದೆ.

ಬಾಧಿತ ಪ್ರದೇಶಗಳ ಕುಟುಂಬಗಳ ಪಡಿತರ ಚೀಟಿ, ಮತದಾರರ ಚೀಟಿಯ ವಿವರಗಳು, ಗ್ರಾಮ ಪಂಚಾಯಿತಿ, ಐಸಿಡಿಎಸ್‌, ಜಿಲ್ಲಾ ಪ್ರಾಕೃತಿಕ ವಿಕೋಪ ಪ್ರಾಧಿಕಾರ, ಜಿಲ್ಲಾ ಶಿಕ್ಷಣ ಇಲಾಖೆಯ ದಾಖಲೆಗಳನ್ನು ಆಧರಿಸಿ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಶಿಬಿರಗಳಲ್ಲಿ ಆಶ್ರಯ ಪಡೆದಿರುವವರು, ಸಂಬಂಧಿಕರ ಮನೆಗಳಲ್ಲಿ ಉಳಿದಿರುವವರು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವವರು ಹಾಗೂ ಸಾವು ದೃಢಪಟ್ಟಿರುವವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದು ಮೊದಲ ಕರಡು ಪಟ್ಟಿಯಾಗಿದೆ. ಸಾರ್ವಜನಿಕರು ಈ ಪಟ್ಟಿಯನ್ನು ಗಮನಿಸಿ, ಉಲ್ಲೇಖವಾಗದ ಹಾಗೂ ನಾಪತ್ತೆ ಆಗಿರುವವರ ಮಾಹಿತಿ ಇದ್ದಲ್ಲಿ ನೀಡಬೇಕು ಎಂದು ಜಿಲ್ಲಾಡಳಿತವು ಕೋರಿದೆ.


ವಯನಾಡ್ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್ ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿರುವ ಖಾತೆಗಳು, ಜಿಲ್ಲಾಧಿಕಾರಿಗಳ ಕಚೇರಿಯ ಸೂಚನಾ ಫಲಕಗಳಲ್ಲೂ ಈ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಈ ಮಧ್ಯೆ, ಚೂರಲ್‌ಮಲ ಮತ್ತು ಮುಂಡಕ್ಕೈ ಗ್ರಾಮಗಳ ವ್ಯಾಪ್ತಿಯಲ್ಲಿ 9ನೇ ದಿನವಾದ ಬುಧವಾರವೂ ಶೋಧಕಾರ್ಯ ಮುಂದುವರಿದಿದೆ. ವಿವಿಧ ಪಡೆಗಳ ಒಟ್ಟು 1,026 ಮಂದಿ ನಿರತರಾಗಿದ್ದಾರೆ.

ಪರಿಹಾರ ನಿರ್ವಹಣೆ, ವಿತರಣೆಗೆ ತಂತ್ರಜ್ಞಾನ ನೆರವು:

ಇನ್ನೊಂದೆಡೆ, ಪರಿಹಾರ ಕಾರ್ಯಗಳಿಗೆ ನೆರವಾಗಲು ಕೊಚ್ಚಿ ಮೂಲದ ಸಾಫ್ಟ್‌ವೇರ್ ಅಭಿವೃದ್ಧಿ ಸಂಸ್ಥೆ ಫೇರ್‌ಕೋರ್‌ ಇನ್ಫೊಟೆಕ್‌ ತಾಂತ್ರಿಕ ಪರಿಣತಿ ಹಾಗೂ ತಂತ್ರಜ್ಞಾನದ ನೆರವನ್ನು ಜಿಲ್ಲಾಡಳಿತಕ್ಕೆ ಒದಗಿಸಿದೆ.

ಇಲ್ಲಿನ ಸೇಂಟ್‌ ಜೋಸೆಫ್‌ ಪ್ರೌಢಶಾಲೆಯಲ್ಲಿ ಸ್ಥಾಪಿಸಿರುವ ಪರಿಹಾರ ನೆರವು ಸಂಗ್ರಹ ಕೇಂದ್ರದಲ್ಲಿ ಅತ್ಯಾಧುನಿಕ ನಿರ್ವಹಣಾ ವ್ಯವಸ್ಥೆಯನ್ನು ಸಂಸ್ಥೆಯ ಸ್ಥಾಪಕ ರಜಿತ್ ರಾಮಚಂದ್ರನ್‌ ಮತ್ತು ತಂಡವು ಅಳವಡಿಸಿದೆ.

ಅಗಾಧವಾಗಿ ಬರುತ್ತಿರುವ ಪರಿಹಾರ ಸಾಮಗ್ರಿಗಳ ನಿರ್ವಹಣೆಗೆ ಕಂದಾಯ ಇಲಾಖೆ ಅಧಿಕಾರಿಗಳ ಕೆಲಸವನ್ನು ಇದು ಹಗುರಾಗಿಸಿದೆ. ಅಲ್ಲದೆ, ಸಕಾಲದಲ್ಲಿ ಮತ್ತು ಪರಿಣಾಮಕಾರಿಯಾಗಿ ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ಸಾಧ್ಯವಾಗಿದೆ.

'ವಯನಾಡ್ ಜಿಲ್ಲಾಧಿಕಾರಿ ಅವರನ್ನು ಈ ಕುರಿತು ಜುಲೈ 31ರಂದು ಸಂಪರ್ಕಿಸಿದೆವು. ಅವರು ಸಮ್ಮತಿಸಿದರು. ಸಂಸ್ಥೆಯ ಇಆರ್‌ಪಿ ಸಾಫ್ಟ್‌ವೇರ್‌ ನಿರ್ವಹಣೆಯ ಒಟ್ಟು ವ್ಯವಸ್ಥೆಯನ್ನು ಸರಾಗಗೊಳಿಸಿದೆ' ಎಂದು ರಜಿತ್ ತಿಳಿಸಿದರು.

'ಸಾಫ್ಟ್‌ವೇರ್ ಬಳಕೆಗೆ 10 ಅಧಿಕಾರಿಗಳಿಗೆ ತರಬೇತಿ ನೀಡಿದೆ. ನಾವು ಇಆರ್‌ಪಿ (ಎಂಟರ್‌ಪ್ರೈಸ್‌ ರಿಸೋರ್ಸ್‌ ಪ್ಲಾನಿಂಗ್) ಅಳವಡಿಸಿದ್ದೇವೆ. ಅಧಿಕಾರಿಗಳು ತ್ವರಿತಗತಿಯಲ್ಲಿ ಇದನ್ನು ಅರ್ಥಮಾಡಿಕೊಂಡರು ಮತ್ತು ಅಳವಡಿಸಿಕೊಂಡರು' ಎಂದು ಹೇಳಿದರು.

ಪಾಲಕ್ಕಾಡ್‌ ಮೂಲದ, 39 ವರ್ಷದ ರಜಿತ್ ಅವರು ಕೊಚ್ಚಿಯಲ್ಲಿ ಕಂಪನಿ ನಡೆಸುತ್ತಿದ್ದಾರೆ. ಸಂಕಷ್ಟ ಸಂದರ್ಭದಲ್ಲಿ ಜನತೆ, ಜಿಲ್ಲಾಡಳಿತಕ್ಕೆ ನೆರವಾಗುತ್ತಾರೆ. ಈ ಹಿಂದೆ ಕೋವಿಡ್‌-19 ಮತ್ತು 2018ರ ಪ್ರವಾಹ ಸಂದರ್ಭದಲ್ಲಿ ಅವರು ಜಿಲ್ಲಾಡಳಿತಕ್ಕೆ ನೆರವಾಗಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries