HEALTH TIPS

ಸುಳ್ಳು ವದಂತಿಗಳಿಂದಾಗಿ 13 ವರ್ಷಗಳಲ್ಲಿ ಅತ್ಯಂತ ಭೀಕರ ದಂಗೆಗಳಿಗೆ ಸಾಕ್ಷಿಯಾದ ಬ್ರಿಟನ್; ನೂರಕ್ಕೂ ಅಧಿಕ ಮಂದಿಯ ಬಂಧನ

 ಲಂಡನ್: ಮಕ್ಕಳ ಹತ್ಯೆಗಳು ಮತ್ತು ವಲಸೆ ವಿರೋಧ ಪ್ರತಿಭಟನೆಗಳಿಗೆ ಸಂಬಂಧಿಸಿದ ವ್ಯಾಪಕ ಗೊಂದಲಗಳಿಂದಾಗಿ ಬ್ರಿಟನ್ 13 ವರ್ಷಗಳಲ್ಲಿ ಅತ್ಯಂತ ಭೀಕರ ಗಲಭೆಗಳಿಗೆ ಸಾಕ್ಷಿಯಾಗಿದೆ. ಇತ್ತೀಚಿನ ಸಾಮೂಹಿಕ ಇರಿತ ಪ್ರಕರಣದ ಶಂಕಿತ ಆರೋಪಿಯು ಮುಸ್ಲಿಮ್ ಮತ್ತು ವಲಸಿಗನಾಗಿದ್ದಾನೆ ಎಂದು ಆನ್‌ಲೈನ್‌ನಲ್ಲಿ ಹರಡಿದ ಸುಳ್ಳು ವದಂತಿಗಳು ಅಶಾಂತಿಗೆ ಕಾರಣವಾಗಿವೆ ಎನ್ನಲಾಗಿದೆ.

ಈ ತಪ್ಪು ಮಾಹಿತಿಯು ಕಟ್ಟಾ ಬಲಪಂಥೀಯರ ಆಕ್ರೋಶವನ್ನು ಹೆಚ್ಚಿಸಿದ್ದು, ವಾರಾಂತ್ಯದಲ್ಲಿ ಅವರು ವರ್ಣಭೇದ ನೀತಿ ವಿರೋಧಿ ಪ್ರತಿಭಟನಾಕಾರರೊಂದಿಗೆ ಘರ್ಷಣೆಗೆ ಇಳಿದಿದ್ದರು ಎಂದು ವರದಿಯಾಗಿದೆ.

ಲಿವರ್‌ಪೂಲ್ ಸಮೀಪದ ಸೌತ್‌ಪೋರ್ಟ್‌ನಲ್ಲಿ ನಡೆದಿದ್ದ ಡ್ಯಾನ್ಸ್ ಪಾರ್ಟಿಯಲ್ಲಿ ಮೂವರು ಯುವತಿಯರು ಮಾರಣಾಂತಿಕ ಚೂರಿ ಇರಿತಕ್ಕೆ ಒಳಗಾದ ಬಳಿಕ ಹಿಂಸಾಚಾರ ಭುಗಿಲೆದ್ದಿತ್ತು. ವಲಸೆ ವಿರೋಧಿ ಪ್ರತಿಭಟನಾಕಾರರು ಬೀದಿಗಿಳಿದು ಆಶ್ರಯ ಕೋರಿ ಬ್ರಿಟನ್ನಿಗೆ ಬಂದಿರುವವರ ವಾಸಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಆ.3ರಂದು ಆಶ್ರಯ ಕೋರಿ ಬಂದವರನ್ನು ಇರಿಸಲಾಗಿರುವ ನಾಟಿಂಗ್‌ಹ್ಯಾಮ್‌ನ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ಗೆ ನುಗ್ಗಲು ಗುಂಪೊಂದು ಪ್ರಯತ್ನಿಸಿತ್ತು.

ಗಲಭೆಯು ಲಿವರ್‌ಪೂಲ್, ಮ್ಯಾಂಚೆಸ್ಟರ್, ಬ್ರಿಸ್ಟಲ್, ಬ್ಲ್ಯಾಕ್‌ಪೂಲ್, ಹಲ್ ಮತ್ತು ಬೆಲ್‌ಫಾಸ್ಟ್ ಸೇರಿದಂತೆ ಅನೇಕ ಪಟ್ಟಣಗಳು ಮತ್ತು ನಗರಗಳಿಗೆ ವ್ಯಾಪಿಸಿದೆ. ಸೌತ್ ಯಾರ್ಕ್‌ಶೈರ್‌ನ ರೋಥರ್‌ಹ್ಯಾಮ್‌ನಲ್ಲಿ ಮಾಸ್ಕ್‌ಗಳನ್ನು ಧರಿಸಿದ್ದ ಪ್ರತಿಭಟನಾಕಾರರು ಶರಣಾರ್ಥಿಗಳನ್ನು ಇರಿಸಲಾಗಿರುವ ಹೋಟೆಲ್‌ನ ಕಿಟಕಿಗಳನ್ನು ಹುಡಿಗೊಳಿಸಿದೆ. ಘರ್ಷಣೆಗಳಲ್ಲಿ ತೊಡಗಿದ್ದ ಪ್ರತಿಭಟನಾಕಾರರು ಪೋಲಿಸರತ್ತ ಇಟ್ಟಿಗೆಗಳು, ಬಾಟಲಿಗಳು ಮತ್ತು ಸ್ಫೋಟಕಗಳನ್ನು ಎಸೆದಿದ್ದು, ಹಲವಾರು ಅಧಿಕಾರಿಗಳು ಗಾಯಗೊಂಡಿದ್ದಾರೆ, ಮಳಿಗೆಗಳಿಗೆ ಹಾನಿಯುಂಟಾಗಿದೆ.

2011ರಲ್ಲಿ ಉತ್ತರ ಲಂಡನ್‌ನಲ್ಲಿ ವ್ಯಕ್ತಿಯೋರ್ವನ ಮೇಲೆ ಪೋಲಿಸರು ಗುಂಡು ಹಾರಿಸಿದ ಬಳಿಕ ಸಂಭವಿಸಿದ್ದ ದಂಗೆಗಳ ಬಳಿಕ ಇದು ಅತ್ಯಂತ ಭೀಕರ ಗಲಭೆಯಾಗಿದೆ ಎಂದು ಬ್ರಿಟನ್ ಮತ್ತು ವೇಲ್ಸ್‌ನ ಪೋಲಿಸ್ ಫೆಡರೇಷನ್ ಬಣ್ಣಿಸಿದೆ.

ಹಿಂಸಾಚಾರವು ತಪ್ಪು ಮಾಹಿತಿಗಳಿಂದಾಗಿ, ವಿಶೇಷವಾಗಿ ಕೊಲೆ ಮತ್ತು ಕೊಲೆ ಯತ್ನಗಳ ಆರೋಪವನ್ನು ಹೊರಿಸಲಾಗಿರುವ 17ರ ಹರೆಯದ ಶಂಕಿತ ಆಶೆಲ್ ರುಡಾಕುಬಾನಾ ಕುರಿತು ಸುಳ್ಳು ವದಂತಿಗಳಿಂದಾಗಿ ಉಲ್ಬಣಗೊಂಡಿದೆ. ಸುಳ್ಳು ಮಾಹಿತಿ ಹರಡುವಿಕೆಯನ್ನು ತಡೆಯಲು ನ್ಯಾಯಾಲಯವು ವೇಲ್ಸ್‌ನಲ್ಲಿ ರ್ವಾಂಡಾ ದಂಪತಿಗೆ ಜನಿಸಿದ್ದ ರುಡಾಕುಬಾನಾನ ಗುರುತು ಪತ್ತೆಗೆ ಪೋಲಿಸರಿಗೆ ಅನುಮತಿ ನೀಡಿದೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ 147 ಜನರ ಬಂಧನವನ್ನು ಪೋಲಿಸರು ದೃಢಪಡಿಸಿದ್ದು, ಇನ್ನಷ್ಟು ಜನರನ್ನು ಬಂಧಿಸುವ ನಿರೀಕ್ಷೆಯಿದೆ. ತಪ್ಪು ಮಾಹಿತಿಗಳು ಹಿಂಸಾಚಾರ ಉಲ್ಬಣಗೊಳ್ಳಲು ಕಾರಣವೆಂದು ಹೇಳಿರುವ ಅಧಿಕಾರಿಗಳು,ಯಾವುದೇ ಕ್ರಮಕ್ಕೆ ಮುನ್ನ ಮಾಹಿತಿಯನ್ನು ಪರಿಶೀಲಿಸುವಂತೆ ಸಾರ್ವಜನಿಕರನ್ನು ಆಗ್ರಹಿಸಿದ್ದಾರೆ.

ಅಶಾಂತಿಯನ್ನು 'ಕಟ್ಟಾ ಬಲಪಂಥೀಯರ ಕ್ರೌರ್ಯ' ಎಂದು ಖಂಡಿಸಿರುವ ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರು, ಮುಸ್ಲಿಮ್ ಸಮುದಾಯಗಳನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries