ನವದೆಹಲಿ: 151 ಮಂದಿ ಶಾಸಕರು ಹಾಗೂ ಸಂಸದರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದಂತೆ ಪ್ರಕರಣಗಳಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಸ್(ಎಡಿಆರ್) ಸಂಘಟನೆ ಹೇಳಿದೆ.
ಈ ಪೈಕಿ ಪಶ್ಚಿಮ ಬಂಗಾಳದ ಜನಪ್ರತಿನಿಧಿಗಳ ಸಂಖ್ಯೆಯೇ ಹೆಚ್ಚಿದೆ ಎಂದು ವರದಿ ತಿಳಿಸಿದೆ.
ಈ ವರದಿ ತಯಾರಿಸಲು 2019ರಿಂದ 2024ರ ನಡುವೆ ವಿವಿಧ ಚುನಾವಣೆಗಳ ಸಂದರ್ಭ ರಾಜಕಾರಣಿಗಳು ಸಲ್ಲಿಸಿರುವ 4,809 ಅಫಿಡವಿಟ್‌ಗಳ ಪೈಕಿ 4,693 ಅನ್ನು ಎಡಿಆರ್ ಪರಿಶೀಲನೆ ನಡೆಸಿದೆ.
ಈ ಪೈಕಿ 16 ಸಂಸದರು ಮತ್ತು 135 ಶಾಸಕರು ಮಹಿಳೆಯರ ವಿರುದ್ಧದ ಅಪರಾಧಗಳ ಕುರಿತಾದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಈ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ಜನಪ್ರತಿನಿಧಿಗಳು ಹೆಚ್ಚಿದ್ದು, 25 ಮಂದಿ ಹಾಲಿ ಸಂಸದರು ಮತ್ತು ಶಾಸಕರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಆಂಧ್ರ ಪ್ರದೇಶದಲ್ಲಿ 21, ಒಡಿಶಾದಲ್ಲಿ 17 ಮಂದಿ ವಿರುದ್ಧ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿವೆ.
ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಹಾಗೂ ಮಹಾರಾಷ್ಟ್ರದ ಠಾಣೆಯಲ್ಲಿ ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಬಗ್ಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ ಈ ವರದಿ ಬಂದಿದೆ.
ಈ ಪೈಕಿ 16 ಮಂದಿ ಹಾಲಿ ಸಂಸದರು ಮತ್ತು ಶಾಸಕರು ಐಪಿಸಿ ಸೆಕ್ಷನ್(ಈಗ ರದ್ದಾಗಿದೆ) 376ರ ಅಡಿ ಅತ್ಯಾಚಾರ ಪ್ರಕರಣಗಳು ದಾಖಲಾಗಿರುವುದಾಗಿ ಮಾಹಿತಿ ನೀಡಿದ್ದಾರೆ. ಈ ಪ್ರಕರಣದಲ್ಲಿ 10 ವರ್ಷದಿಂದ ಜೀವಾವಧಿವರೆಗೆ ಶಿಕ್ಷೆ ವಿಧಿಸಬಹುದಾಗಿದೆ.
ಒಬ್ಬರೇ ಸಂತ್ರಸ್ತೆ ವಿರುದ್ಧ ಪದೇ ಪದೇ ದೌರ್ಜನ್ಯದ ಆರೋಪಗಳೂ ಇದರಲ್ಲಿವೆ. ಅತ್ಯಾಚಾರ ಪ್ರಕರಣ ಎದುರಿಸುತ್ತಿರುವವರಲ್ಲಿ ಇಬ್ಬರು ಸಂಸದರು ಮತ್ತು 14 ಮಂದಿ ಶಾಸಕರಿದ್ದಾರೆ.
ಪಕ್ಷವಾರು ಭಾರತೀಯ ಜನತಾ ಪಕ್ಷದ(ಬಿಜೆಪಿ) 54 ಮಂದಿ ಸಂಸದರು, ಶಾಸಕರು ಮಹಿಳೆಯರ ವಿರುದ್ಧದ ದೌರ್ಜನ್ಯದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್‌ನ 23, ಟಿಡಿಪಿಯ 17 ಮಂದಿ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಕ್ರಿಮಿನಲ್ ಹಿನ್ನೆಲೆ ಇರುವ ರಾಜಕಾರಣಿಗಳಿಗೆ ಪಕ್ಷಗಳು ಟಿಕೆಟ್ ನೀಡಬಾರದು ಎಂದು ಬಲವಾಗಿ ಶಿಫಾರಸು ಮಾಡಿರುವ ಎಡಿಆರ್, ಅದರಲ್ಲೂ ಅತ್ಯಾಚಾರ ಸೇರಿದಂತೆ ಮಹಿಳೆಯರ ವಿರುದ್ಧ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವವರನ್ನು ದೂರ ಇಡುವಂತೆ ಒತ್ತಿ ಹೇಳಿದೆ.