ಕಾಸರಗೋಡು: ಚೆಮ್ನಾಡ್ ಗ್ರಾಮ ಪಂಚಾಯಿತಿಯ ಚಟ್ಟಂಚಾಲ್‍ನಲ್ಲಿ ನಿರ್ಮಾಣವಾಗುತ್ತಿರುವ ಲೈಫ್ ವಸತಿ ಸಂಕೀರ್ಣದ ಕಾಮಗಾರಿ ಅಕ್ಟೋಬರ್ 15 ರೊಳಗೆ ಪೂರ್ತಿಗೊಳಿಸಲು ಜಿಲ್ಲಾಧಿಕಾರಿ ಕಚೇರಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಲೈಫ್ ವಸತಿ ಸಮುಚ್ಚಯ ನಿರ್ಮಾಣ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀರ್ಮಾನಿಸಲಾಯಿತು.
ವಸತಿ ಸಮುಚ್ಚಯದ ನಿರ್ಮಾಣ ಕಾಮಗಾರಿ ಶೇ.85ರಷ್ಟು ಪೂರ್ಣಗೊಂಡಿದೆ. ವಿದ್ಯುತ್ ಮತ್ತು ನೆಲಹಾಸಿನ ಕಾಮಗಾರಿಗಳು ಪೂರ್ಣಗೊಳ್ಳಬೇಕಾಗಿದೆ. ಸೆ.20ರೊಳಗೆ ಬಣ್ಣ ಹಚ್ಚುವ ಕಾಮಗಾರಿ ಪೂರ್ಣಗೊಳ್ಳಲಿದೆ. ಅಕ್ಟೋಬರ್ 15ರೊಳಗಾಗಿ ಕುಡಿಯುವ ನೀರಿನ ವ್ಯವಸ್ಥೆ ಪೂರ್ತಿಗೊಳಿಸಬೇಖು. ಜಲಜೀವನ ಮಿಷನ್ ಅಡಿಯಲ್ಲಿ ಕೇರಳ ಜಲ ಪ್ರಾಧಿಕಾರವು ವಸತಿ ಸಮುಚ್ಚಯದಲ್ಲಿ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಬೇಕು. ತಾಂತ್ರಿಕ ಅಡೆತಡೆಗಳಿಂದ ಕಾಮಗಾರಿ ವಿಳಂಬವಾಗುವುದನ್ನು ತಪ್ಪಿಸಲು ಪರ್ಯಾಯ ಮಾರ್ಗ ಕಂಡುಕೊಳ್ಳುವಂತೆ ಹಾಗೂ ವೆಚ್ಚ ಅಂದಾಜಿಸುವಂತೆ ಸಭೆಯಲ್ಲಿ ಶಾಸಕ ಸಿ.ಎಚ್ ಕುಞಂಬು ಜಲ ಪ್ರಾಧಿಕಾರ ಕಾರ್ಯಪಾಲಕ ಎಂಜಿನಿಯರ್‍ಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ನವಕೇರಳ ಕ್ರಿಯಾ ಯೋಜನೆ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣನ್, ಲೈಫ್ ಮಿಷನ್ ಜಿಲ್ಲಾ ಸಂಯೋಜಕ ಎಂ. ವತ್ಸನ್, ಕಟ್ಟಡ ನಿರ್ಮಾಣ ಗುತ್ತಿಗೆ ವಹಿಸಿಕೊಂಡಿರುವ ಹೈದರಾಬಾದ್ ಮೂಲದ ಪೆನ್ನಾರ್ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಎ.ದೀಪಕ್, ಕೇರಳ ಜಲ ಪ್ರಾಧಿಕಾರದ ಕಾಞಂಗಾಡ್ ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಎ.ವಿ.ಪ್ರಕಾಶನ್, ಕೇರಳ ಜಲ ಪ್ರಾಧಿಕಾರ ಕಾಸರಗೋಡು ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಂ.ಪ್ರಕಾಶನ್, ಲೈಫ್ ಮಿಷನ್ ಜಿಲ್ಲಾ ಎಂಜಿನಿಯರ್ ಇ. ಶಾನವಾಸ್ ಮೊದಲಾದವರು ಭಾಗವಹಿಸಿದ್ದರು.