ನವದೆಹಲಿ: 'ಮುಖ್ಯಮಂತ್ರಿ ಪರಿಹಾರ ನಿಧಿ'ಗೆ ₹15 ಕೋಟಿ ದೇಣಿಗೆ ನೀಡಲು ವಂಚನೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಮುಂದಾಗಿದ್ದಾರೆ.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಸುಕೇಶ್ ಚಂದ್ರಶೇಖರ್ ಈಗ ನವದೆಹಲಿಯ ಮಂಡೋಲಿ ಜೈಲಿನಲ್ಲಿದ್ದಾರೆ.
ಕೇರಳದಲ್ಲಿ ನಡೆದಿರುವ ಭೂಕುಸಿತದಿಂದ ತೀವ್ರ ದುಃಖಿತನಾಗಿದ್ದು, ಅಗತ್ಯವಿರುವ ಸಮಯಲ್ಲಿ ಸೂಕ್ತ ನೆರವು ನೀಡಲು ಸಿದ್ಧ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರ ಬರೆದಿರುವುದನ್ನು ಅವರ ಪರ ವಕೀಲ ಅನಂತ್ ಮಲಿಕ್ ಕೂಡ ಖಚಿತಪಡಿಸಿದ್ದಾರೆ.
'ನನ್ನ ಫೌಂಡೇಶನ್‌ನಿಂದ ₹15 ಕೋಟಿ ದೇಣಿಗೆಯನ್ನು 'ಮುಖ್ಯಮಂತ್ರಿಗಳ ಪರಿಹಾರ ನಿಧಿ'ಗೆ ನೀಡುತ್ತಿದ್ದು, ಇದನ್ನು ಸ್ವೀಕರಿಸುವಂತೆ ನಿಮ್ಮಲ್ಲಿ ಮನವಿ ಮಾಡುತ್ತೇನೆ. ನಾನು ನೀಡುತ್ತಿರುವ ನೆರವನ್ನು ಸಂತ್ರಸ್ತರಿಗೆ ತಕ್ಷಣದಲ್ಲಿ 300 ಮನೆ ನಿರ್ಮಿಸಲು ಬೆಂಬಲವಾಗಿ ನೀಡುತ್ತಿದ್ದೇನೆ' ಎಂದು ಪತ್ರದಲ್ಲಿ ವಿವರಿಸಿದ್ದಾನೆ.
'ಈ ಮೊತ್ತವನ್ನು 'ಕಾನೂನುಬದ್ಧವಾದ ವ್ಯವಹಾರ ಖಾತೆ'ಯಿಂದ ನೀಡುವುದಾಗಿ ತಿಳಿಸಿರುವ ಸುಕೇಶ್, ಭೂಕುಸಿತದಿಂದ ಮನೆ ಕಳೆದುಕೊಂಡವರಿಗೆ ಪುನರ್‌ವಸತಿ, ಕ್ಷೇಮಾಭಿವೃದ್ಧಿಗೆ ಬಳಸಿಕೊಳ್ಳಬೇಕು' ಎಂದು ಮನವಿ ಮಾಡಿದ್ದಾನೆ.
ಚಂದ್ರಶೇಖರ್ ಬರೆದ ಪತ್ರಕ್ಕೆ ಕೇರಳ ಸರ್ಕಾರವು ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.