ವಾಷಿಂಗ್ಟನ್: ಅಮೆರಿಕದ ಪ್ರತಿಷ್ಠಿತ ಕಾಫಿಹೌಸ್ ಬ್ರ್ಯಾಂಡ್ ಆಗಿರುವ ಸ್ಟಾರ್‌ಬಕ್ಸ್‌ನ ನೂತನ ಸಿಇಒ ಬ್ರಾಯನ್ ನಿಕೋಲ್ ಅವರು ಪ್ರತಿದಿನ 1,600 ಕಿ.ಮೀ ಪ್ರಯಾಣ ಮಾಡಿ ಕಚೇರಿಗೆ ಬರಲಿದ್ದಾರೆ ಎಂದು ಕಂಪನಿ ತಿಳಿಸಿರುವುದಾಗಿ ವರದಿಯಾಗಿದೆ.
ನಿಕೋಲ್ ಅವರಿಗೆ ನೀಡಿರುವ ಪತ್ರದಲ್ಲಿ ವಾರದಲ್ಲಿ ಮೂರು ದಿನ ಸಿಯಾಟಲ್‌ನಲ್ಲಿರುವ ಸ್ಟಾರ್‌ಬಕ್ಸ್‌ನ ಪ್ರಧಾನ ಕಚೇರಿಗೆ ಬಂದು ಕೆಲಸ ಮಾಡಬೇಕಾಗಿ ಸೂಚಿಸಲಾಗಿದೆ.
ನಿಕೋಲ್ ಅವರು ಮುಂದಿನ ತಿಂಗಳು ಸ್ಟಾರ್‌ಬಕ್ಸ್‌ನ ನೂತನ ಸಿಇಒ ಆಗಿ ಅಧಿಕಾರಿ ಸ್ವೀಕರಿಸಲಿದ್ದಾರೆ.
50 ವರ್ಷದ ನಿಕೋಲ್ ಅವರು ಸ್ಟಾರ್‌ಬಕ್ಸ್ ಸಿಇಒ ಹುದ್ದೆಗೆ 1.6 ಮಿಲಿಯನ್ ಡಾಲರ್ ಅಂದರೆ ಸುಮಾರು ₹ 13, 42,77,760 ಸಂಬಳ ಪಡೆಯಲಿದ್ದಾರೆ. ಇದಲ್ಲದೆ ಕಾರ್ಯಕ್ಷಮತೆಗೆ ತಕ್ಕ ಹಾಗೆ ಬೋನಸ್ ಹಾಗೂ ವಾರ್ಷಿಕ ಇಕ್ವಿಟಿಯನ್ನೂ ಪಡೆಯಲಿದ್ದಾರೆ.
ನಿಕೋಲ್ ದೂರ ಪ್ರಯಾಣಿಸಿ ಕೆಲಸ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಫಾಸ್ಟ್ ಫುಡ್‌ಗಳ ಕಂಪನಿ 'ಚಿಪಟ್ಲೆ'ಯ ಸಿಇಒ ಆಗಿದ್ದಾಗ 2018ರಲ್ಲಿ ಇದೇ ರೀತಿಯ ವ್ಯವಸ್ಥೆಯ ಮೂಲಕ ಕಚೇರಿಗೆ ಪ್ರಯಾಣಿಸುತ್ತಿದ್ದರು.
ಈ ಕುರಿತು ಹೇಳಿಕೆ ನೀಡಿರುವ ಸ್ಟಾರ್‌ಬಕ್ಸ್ ವಕ್ತಾರ, 'ನಿಕೋಲ್ ಅವರು ಹೆಚ್ಚಿನ ವೇಳೆ ನಮ್ಮ ಸಿಯಾಟಲ್ ಕಚೇರಿಯಲ್ಲೇ ಕಳೆಯಬೇಕಾಗುತ್ತದೆ. ಅಲ್ಲದೆ ನಮ್ಮ ಗ್ರಾಹಕರ ಭೇಟಿ, ವಹಿವಾಟಿಗೆ ಸಂಬಂಧಿಸಿದ ಸಭೆಗಳನ್ನು ಪ್ರಧಾನ ಕಚೇರಿಯಲ್ಲಿಯೇ ನಡೆಸಲಾಗುತ್ತದೆ. ಅದಾಗ್ಯೂ ಅವರಿಗೆ ಹೈಬ್ರಿಡ್ ಕೆಲಸದ ಅವಕಾಶ ನೀಡಲಾಗಿದೆ. ಹೀಗಾಗಿ ಅವರು ವಾರದಲ್ಲಿ ಮೂರು ದಿನ ಸಿಯಾಟಲ್‌ಗೆ ಬಂದು ಕೆಲಸ ಮಾಡಬೇಕಾಗುತ್ತದೆ' ಎಂದು ಸಿಎನ್‌ಬಿಸಿಗೆ ತಿಳಿಸಿದ್ದಾರೆ.
ಸದ್ಯ ಸ್ಟಾರ್‌ಬಕ್ಸ್‌ನ ಉದ್ಯಮ ಕುಸಿತ ಕಾಣುತ್ತಿದ್ದು, ಅದನ್ನು ಸುಧಾರಿಸಲು ನಿಕೋಲ್ ಅವರನ್ನು ಸಿಇಒ ಸ್ಥಾನಕ್ಕೆ ಕರೆತರಲಾಗಿದೆ ಎಂದು ವರದಿಯಾಗಿದೆ. ಈ ವರೆಗೆ ಈ ಹುದ್ದೆಯಲ್ಲಿ ಭಾರತ ಮೂಲದ ಲಕ್ಷ್ಮಣ್ ನರಸಿಂಹನ್ ಅವರು ಕಾರ್ಯನಿರ್ವಹಿಸುತ್ತಿದ್ದರು.