HEALTH TIPS

ಉತ್ತರಾಖಂಡ: 16 ವರ್ಷದ ಬಾಲಕಿ ಮೇಲೆ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ, ಐವರ ಬಂಧನ

Top Post Ad

Click to join Samarasasudhi Official Whatsapp Group

Qries

 ಡೆಹರಾಡೂನ್: ಉತ್ತರಾಖಂಡದಲ್ಲಿ 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಭಾನುವಾರ ಬಂಧಿಸಲಾಗಿದೆ ಎಂದು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.

ಉತ್ತರ ಪ್ರದೇಶದ ಮೊರದಾಬಾದ್‌ನ ಬಾಲಕಿಯು ದೆಹಲಿಯಿಂದ ಡೆಹರಾಡೂನ್‌ಗೆ ಬಸ್‌ನಲ್ಲಿ ಬಂದಿದ್ದಳು.

ಆಕೆಯ ಮೇಲೆ ಆಗಸ್ಟ್‌ 12ರಂದು ಲೈಂಗಿಕ ದೌರ್ಜನ್ಯ ನಡೆದಿತ್ತು.

ಪ್ರಕರಣದ ಬಗ್ಗೆ ಡೆಹರಾಡೂನ್‌ ಎಸ್‌ಎಸ್‌ಪಿ ಅಜಯ್‌ ಸಿಂಗ್‌ ಮಾಹಿತಿ ನೀಡಿದ್ದಾರೆ.

'ಬಾಲಕಿಯು ಇಲ್ಲಿನ ಮಳಿಗೆಯೊಂದರ ಪಕ್ಕದಲ್ಲಿ ಕುಳಿತಿರುವುದಾಗಿ ಹಾಗೂ ಸ್ಥಳದಲ್ಲಿ ಅನುಮಾನಾಸ್ಪದ ವ್ಯಕ್ತಿಯೊಬ್ಬ ಇರುವುದಾಗಿ ಆಗಸ್ಟ್ 13ರಂದು ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಬಂದಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿತ್ತು. ಬಾಲಕಿಯನ್ನು ಬಾಲ ನಿಕೇತನ ಸಮಾಲೋಚನಾ ಕೇಂದ್ರಕ್ಕೆ ಕಳುಹಿಸಲಾಗಿತ್ತು' ಎಂದು ತಿಳಿಸಿದ್ದಾರೆ.

ಎರಡು, ಮೂರು ಸಮಾಲೋಚನೆ ನಡೆಸಿದ ಬಳಿಕ ಸಂತ್ರಸ್ತೆಯು ತನ್ನ ಮೇಲೆ ಐವರು ಅತ್ಯಾಚಾರವೆಸಗಿರುವುದಾಗಿ ತಿಳಿಸಿದ್ದಾಳೆ ಎಂದಿದ್ದಾರೆ.

'ಬಾಲಕಿಯ ಹೇಳಿಕೆ ಪ್ರಕಾರ, ಅಂತರರಾಜ್ಯ ಬಸ್‌ ಟರ್ಮಿನಲ್‌ನಲ್ಲಿ ನಿಲ್ಲಿಸಿದ್ದ ಉತ್ತರಾಖಂಡ ರಸ್ತೆ ಸಾರಿಗೆ ಬಸ್‌ನಲ್ಲಿ ಮಧ್ಯರಾತ್ರಿ ವೇಳೆ ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ. ಈ ಸಂಬಂಧ, ಐವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 70 ಹಾಗೂ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದೆವು' ಎಂದು ಸಿಂಗ್‌ ವಿವರಿಸಿದ್ದಾರೆ.

'ಬಾಲಕಿ ಕುಳಿತಿದ್ದ ಮಳಿಗೆಯ ಬಳಿ ಇದ್ದ ಶಂಕಿತ ವ್ಯಕ್ತಿ ಬಸ್‌ ಚಾಲಕ. ವಿಚಾರಣೆ ವೇಳೆ ಆತ ಇಡೀ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಬಸ್‌ ನಿರ್ವಾಹಕ ಸಹ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಸದ್ಯ ಒಟ್ಟು ಐವರನ್ನು ಬಂಧಿಸಲಾಗಿದೆ. ಇದರಲ್ಲಿ ಮೂವರು ಬಸ್‌ ಚಾಲಕರು, ಒಬ್ಬ ನಿರ್ವಾಹಕ ಮತ್ತು ಇನ್ನೊಬ್ಬ ಕ್ಯಾಶಿಯರ್‌. ವಿಧಿವಿಜ್ಞಾನ ತಂಡ ಬಸ್‌ನಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ' ಎಂದು ಮಾಹಿತಿ ನೀಡಿದ್ದಾರೆ.

'ಬಾಲಕಿಯ ವೈದ್ಯಕೀಯ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ. ಆಕೆಯ ಊರು ಯಾವುದು ಎಂಬುದನ್ನು ಪತ್ತೆ ಹಚ್ಚಿದ್ದೇವೆ. ಪೋಷಕರಿಗೆ ವಿಚಾರ ಮುಟ್ಟಿಸಿ, ಬರಲು ಹೇಳಿದ್ದೇವೆ' ಎಂದೂ ತಿಳಿಸಿದ್ದಾರೆ.

ಉತ್ತರಾಖಂಡ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಕುಸುಮ್‌ ಕಂಡ್ವಾಲ್‌ ಅವರು, ಬಾಲ ನಿಕೇತನ ಕೇಂದ್ರಕ್ಕೆ ಇಂದು (ಭಾನುವಾರ) ಬೆಳಿಗ್ಗೆ ಭೇಟಿ ನೀಡಿ ಸಂತ್ರಸ್ತೆಯನ್ನು ಮಾತನಾಡಿಸಿದ್ದಾರೆ ಎಂದು ವರದಿಯಾಗಿದೆ.

'ಎಸ್‌ಎಸ್‌ಪಿ ಹಾಗೂ ಆರೋಗ್ಯ ಅಧಿಕಾರಿಗಳಿಂದ ವಿಸ್ತೃತವಾದ ಮಾಹಿತಿ ಪಡೆದ ನಂತರ, ತಪ್ಪಿತಸ್ತರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದೇನೆ. ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದು' ಎಂದು ಕುಸುಮ್‌ ಹೇಳಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries