ಜರ್ಸುಗುಡ: ಸರಪಳಿಗಳು ಕಾಲುಗಳನ್ನು ಬಂಧಿಸಿಸಿದ್ದರೂ ಉಕ್ಕಿ ಹರಿಯುತ್ತಿದ್ದ ಮಹಾನದಿ ನದಿಯಲ್ಲಿ 17 ಕಿ.ಮೀ ವರೆಗೂ ತೇಲುತ್ತಾ ಬಂದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.
ಛತ್ತೀಸ್‌ಗಢದ ಸಾರಂಗಢ-ಬಿಲೈಗಢ ಜಿಲ್ಲೆಯ ಸರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಪುರತ್ ಗ್ರಾಮದ ಸರೋಜಿನಿ ಚೌಹಾಣ್ (33) ರಕ್ಷಣೆಗೊಳಗಾದ ಮಹಿಳೆಯಾಗಿದ್ದಾರೆ.
ಪಲ್ಸಾಡಾ ಗ್ರಾಮದ ರಮೇಶ್ ಸೇಠ್ ಮತ್ತು ಅವರ ಮಗ ದಾನಿ ಮೀನುಗಾರಿಕೆಗಾಗಿ ನದಿಗೆ ತೆರಳಿದಾಗ ಬೆಳಗಿನ ಜಾವದಲ್ಲಿ ರಕ್ಷಿಸಲಾಗಿದೆ. ಪಲ್ಸಾಡಾ ಗ್ರಾಮದ ರಮೇಶ್ ಸೇಠ್ ಮತ್ತು ಅವರ ಮಗ ದಾನಿ ಎಂಬುವವರು ಮೀನುಗಾರಿಕೆಗಾಗಿ ನದಿಗೆ ತೆರಳಿದ್ದಾಗ ಕೂಗು ಕೇಳಿಸಿಕೊಂಡು, ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
ನದಿ ನೀರು ನೊರೆಯಿಂದ ಮುಚ್ಚಿದ್ದು, ಈ ವೇಳೆ ಮಹಿಳೆಯೊಬ್ಬರು ಸಹಾಯಕ್ಕಾಗಿ ಅಂಗಲಾಚುತ್ತಿರುವ ಕೂಗು ಕೇಳಿಸಿಕೊಂಡಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಕಂಡು ಬಂದಿದ್ದು, ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಆಕೆಯನ್ನು ದೋಣಿಯಲ್ಲಿ ಕರೆದೊಯ್ದ ತಂದೆ ಹಾಗೂ ಮಗ ರೆಂಗಾಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸರೋಜಿನಿಯವರನ್ನು ವೈದ್ಯಕೀಯ ತಪಾಸಣೆಗೆ ಲಖನ್‌ಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಬಳಿಕ ಪೊಲೀಸರು ಕುಟುಂಬ ಪತ್ತೆಗಾಗಿ ಸರಿಯಾ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ವಿಚಾರ ತಿಳಿಸಿದ ಸರೋಜಿನಿ ಅವರ ಸಹೋದರ ಜಗದೀಶ್ ಚೌಹಾಣ್ ಹಾಗೂ ಅವರ ಪತ್ನಿ, ಆಸ್ಪತ್ರೆಯಿಂದ ಮಹಿಳೆಯನ್ನು ಮನೆಗೆ ಕರೆದೊಯ್ದಿದ್ದಾರೆ.
5 ವರ್ಷಗಳ ಹಿಂದೆ ಸಹೋದರಿಗೆ ವಿವಾಹವಾಗಿದ್ದು. ವಿವಾಹದ ಬಳಿಕ ಮಾನಸಿಕ ಅಸ್ವಸ್ಥತೆ ಶುರುವಾಗಿತ್ತು. ಸ್ಥಿತಿ ಹದಗೆಡುತ್ತಿದ್ದಂತೆ, ತವರಿಗೆ ಕಳುಹಿಸಲಿದ್ದರು. ಮಾನಸಿಕ ಅಸ್ವಸ್ಥಳಾಗಿದ್ದ ಕಾರಣ ಆಕೆಯ ಕಾಲಿಗೆ ಸರಪಳಿ ಹಾಕಲಾಗಿತ್ತು. ರಾತ್ರಿ ಊಟ ಮುಗಿಸಿ ಮಲಗಿದ್ದಾಗ, ಮನೆಯಿಂದ ಹೊರಬಂದಿದ್ದಾರೆ. ಈ ವೇಳೆ ನದಿ ಬಳಿ ಹೋಗಿ, ಅಪಾಯಕ್ಕೆ ಸಿಲುಕಿದ್ದಾರೆಂದು ಜಗದೀಶ್ ಜೌಹಾಣ್ ಹೇಳಿದ್ದಾರೆ.
ಈ ನಡುವೆ ಸ್ಥಳೀಯರು ಮಹಿಳೆ ಪ್ರಾಣಾಪಾಯದಿಂದ ಪಾರಾಗಿರುವುದನ್ನು ಪವಾಡವೆಂದು ಹೇಳಲು ಆರಂಭಿಸಿದ್ದಾರೆ. ಎಡೆಬಿಡದೆ ಮಳೆ ಸುರಿಯುತ್ತಿದ್ದು, ಮಹಾನದಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಮಹಿಳೆ ತೇಲಿ ಬಂದು ಪಾರಾಗಿರುವುದು ನಿಜಕ್ಕೂ ದೇವರ ಆಶೀರ್ವಾದವೇ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ. ಇದೇ ವೇಳೆ ಮಹಿಳೆಯರನ್ನು ರಕ್ಷಣೆ ಮಾಡಿದ ಮೀನುಗಾರರ ಕುರಿತಂತೆಯೂ ಶ್ಲಾಘನೆ ವ್ಯಕ್ತವಾಗುತ್ತಿದೆ.