ಶಿಮ್ಲಾ: ಕಳೆದ ನಾಲ್ಕು ದಿನಗಳಿಂದ ಹಿಮಾಚಲ ಪ್ರದೇಶದ ಬಹುತೇಕ ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, 190ಕ್ಕೂ ಹೆಚ್ಚು ರಸ್ತೆಗಳನ್ನು ಬಂದ್ ಮಾಡಲಾಗಿದೆ. ಅಲ್ಲದೇ ಆಗಸ್ಟ್ 7ರವರೆಗೆ ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ 'ಯೆಲ್ಲೋ' ಅಲರ್ಟ್ ಘೋಷಿಸಿದೆ.
ಮಂಡಿಯಲ್ಲಿ 79 ರಸ್ತೆಗಳನ್ನು , ಕುಲ್ಲುವಿನಲ್ಲಿ 38 , ಚಂಬಾದಲ್ಲಿ 35, ಶಿಮ್ಲಾದಲ್ಲಿ 30, ಕಂಗ್ರಾದಲ್ಲಿ 5 , ಕಿನ್ನೌರ್, ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಗಳಲ್ಲಿ ತಲಾ 2 ರಸ್ತೆಗಳು ಸೇರಿ ಒಟ್ಟು 191 ರಸ್ತೆಗಳನ್ನು ಬಂದ್ ಮಾಡಲಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಶನಿವಾರ ತಿಳಿಸಿದೆ.
ರಾಜ್ಯದಲ್ಲಿ ಇದುವರೆಗೆ 294 ಟ್ರಾನ್ಸ್‌ಫಾರ್ಮರ್‌ಗಳು ಮತ್ತು 120 ನೀರು ಸರಬರಾಜು ಯೋಜನೆಗಳು ಸ್ಥಗಿತಗೊಂಡಿವೆ ಎಂದು ಅದು ತಿಳಿಸಿದೆ.
ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆ (HRTC) ಒಟ್ಟು 3,612 ಮಾರ್ಗಗಳಲ್ಲಿ 82 ಬಸ್ ಸೇವೆಗಳನ್ನು ಸ್ಥಗಿತಗೊಳಿಸಿದೆ ಎಂದು ಎಚ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರೋಹನ್ ಚಂದ್ ಠಾಕೂರ್ ತಿಳಿಸಿದ್ದಾರೆ.
ರಾಜ್ಯದ ಕೆಲವು ಭಾಗಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುತ್ತಿದೆ. ಶುಕ್ರವಾರ ಜೋಗಿಂದರ್ ನಗರದಲ್ಲಿ 8.5 ಸೆಂ.ಮೀ. ಮಳೆಯಾಗಿದೆ. ಗೋಹರ್‌ನಲ್ಲಿ 8.0 ಸೆಂ.ಮೀ., ಶಿಲಾರುನಲ್ಲಿ 7.6 ಸೆಂ.ಮೀ. ಪೋಂಟಾ ಸಾಹಿಬ್‌ನಲ್ಲಿ 6.7 ಸೆಂ.ಮೀ., ಪಾಲಂಪುರದಲ್ಲಿ 5.7 ಸೆಂ.ಮೀ., ಧರ್ಮಶಾಲಾದಲ್ಲಿ 5.5 ಸೆಂ.ಮೀ. ಮತ್ತು ಚೋಪಾಲದಲ್ಲಿ 5.2 ಸೆಂ.ಮೀ. ಮಳೆಯಾಗಿದೆ.
ಜೂನ್ 27ರಿಂದ ಆಗಸ್ಟ್ 1 ರವರೆಗೆ ರಾಜ್ಯದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 77 ಮಂದಿ ಸಾವಿಗೀಡಾಗಿದ್ದಾರೆ. ಸುಮಾರು ₹655 ಕೋಟಿ ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.