ಕೋಪನ್‌ಹೇಗನ್: ಉಕ್ರೇನ್ ಮೇಲೆ ಯುದ್ಧ ಆರಂಭಿಸಿದಾಗಿನಿಂದ ಆ ದೇಶದಲ್ಲಿನ ಆರೋಗ್ಯ ಸೇವೆಗಳ ಮೇಲೆ 1,940 ಸಲ ರಷ್ಯಾ ದಾಳಿ ಮಾಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಯುರೋಪ್ ವಿಭಾಗ ಸೋಮವಾರ ಹೇಳಿದೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಡಬ್ಲ್ಯುಎಚ್‌ಒ, ಆರೋಗ್ಯ ಸೌಕರ್ಯಗಳು, ಸಲಕರಣೆಗಳು, ಸಿಬ್ಬಂದಿಗಳ ಮೇಲೆ ನಡೆಸಿದ ದಾಳಿಗಳು ಉದ್ದೇಶಪೂರ್ಕವಾಗಿದ್ದವು ಎಂದು ಸ್ಪಷ್ಟಪಡಿಸಿದೆ.
ಹಾಗೆಯೇ, 2023ರ ಡಿಸೆಂಬರ್‌ನಿಂದ ಈಚೆಗೆ ಸಂತ್ರಸ್ತರ ಸಂಖ್ಯೆ ಏರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ.
'ಯಾವುದೇ ಮಾನವೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಡಬ್ಲ್ಯುಎಚ್‌ಒ ದಾಖಲಿಸಿದ ಗರಿಷ್ಠ ಸಂಖ್ಯೆ ಇದಾಗಿದೆ' ಎಂದೂ ಉಲ್ಲೇಖಿಸಿದೆ.
'ಕಳೆದ ವರ್ಷ ಆರೋಗ್ಯ ಸೇವೆಗಳ ಮೇಲೆ ನಡೆದ ದಾಳಿಯಲ್ಲಿ ಕಾರ್ಯಕರ್ತರು, ರೋಗಿಗಳು ಸೇರಿದಂತೆ 24 ಮಂದಿ ಮೃತಪಟ್ಟಿದ್ದರು. ಆದರೆ, 2024ರ ಮೊದಲ ಏಳೂವರೆ ತಿಂಗಳಲ್ಲೇ 34 ಮಂದಿ ಮೃತಪಟ್ಟಿದ್ದಾರೆ' ಎಂದು ವಿವರಿಸಿದೆ.
ರಷ್ಯಾ ಸೇನೆ 2022ರ ಫೆಬ್ರುವರಿಯಲ್ಲಿ ಉಕ್ರೇನ್‌ನಲ್ಲಿ ಆಕ್ರಮಣ ಪ್ರಾರಂಭಿಸಿತ್ತು. ಆರೋಗ್ಯ ಸೇವೆಗಳ ಮೇಲಿನ ದಾಳಿಯಿಂದಾಗಿ ಇದುವರೆಗೆ ಒಟ್ಟು 166 ಜನರು ಮೃತಪಟ್ಟಿದ್ದಾರೆ. 514 ಮಂದಿ ಗಾಯಗೊಂಡಿದ್ದಾರೆ.
ಆಗಸ್ಟ್ 19 ಅನ್ನು 'ವಿಶ್ವ ಮಾನವೀಯ ದಿನ'ವಾಗಿ ಆಚರಿಸಲಾಗುತ್ತದೆ. ಆದರೆ ವಿಶ್ವದಾದ್ಯಂತ ಮಾನವೀಯ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸುಮಾರು 280 ಮಂದಿಯನ್ನು 2023ರಲ್ಲಿ ಹತ್ಯೆ ಮಾಡಲಾಗಿದೆ ಎಂದು ವಿಶ್ವಸಂಸ್ಥೆಯು ಕಿಡಿಕಾರಿದೆ.
ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಮರ ಹೀಗೇ ಮುಂದುವರಿದರೆ ಈ ವರ್ಷವೂ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾದ್ಯತೆ ಇದೆ ಎಂದು ಎಚ್ಚರಿಸಿದೆ.