ನವದೆಹಲಿ: 1984ರಲ್ಲಿ ಸಿಖ್ ವಿರೋಧಿ ದಂಗೆಯಲ್ಲಿ ಪುಲ್ ಬಂಗಶ್ ಗುರುದ್ವಾರದ ಎದುರು ಮೂರು ಜನರನ್ನು ಹತ್ಯೆಗೈದ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಪಾತ್ರದ ಕುರಿತು ದೆಹಲಿ ನ್ಯಾಯಾಲಯವು ಆ. 16ರಂದು ಆದೇಶ ಪ್ರಕಟಿಸಲಿದೆ. ಆದೇಶ ಪ್ರಕಟಿಸಲು ಈ ಮೊದಲು ಶುಕ್ರವಾರ (ಆ.2) ದಿನಾಂಕ ನಿಗದಿಯಾಗಿತ್ತು. ಸಿಬಿಐ ವಿಶೇಷ ಜಡ್ಜ್ ರಾಕೇಶ್ ಸಿಯಾಲ್ ಅವರು ರಜೆಯಲ್ಲಿದ್ದ ಕಾರಣ ಆ. 16ಕ್ಕೆ ದಿನಾಂಕ ನಿಗದಿಪಡಿಸಲಾಯಿತು.
ಇದಕ್ಕೂ ಮೊದಲು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. 1984ರ ನ. 1ರಂದು ಗುರುದ್ವಾರದ ಬಳಿ ಬಿಳಿ ಅಂಬಾಸೆಡರ್ ಕಾರಿನಲ್ಲಿ ಟೈಟ್ಲರ್ ಬಂದಿಳಿದರು. 'ಸಿಖ್ಖರನ್ನು ಕೊಲ್ಲಿ, ಅವರು ನಮ್ಮ ತಾಯಿಯನ್ನು ಕೊಂದಿದ್ದಾರೆ' ಎಂದು ಹಿಂಸಾಚಾರದಲ್ಲಿ ತೊಡಗಿದ್ದ ಗುಂಪನ್ನು ಪ್ರಚೋದಿಸಿದರು. ಇದರ ಪರಿಣಾಮವಾಗಿ ಮೂವರು ಹತರಾದರು ಎಂದು ಹೇಳಲಾಗಿದೆ.
2023ರ ಆಗಸ್ಟ್‌ನಲ್ಲಿ ಟೈಟ್ಲರ್ ಅವರಿಗೆ ನಿರೀಕ್ಷಣಾ ಜಾಮೀನನ್ನು ₹1ಲಕ್ಷ ವೈಯಕ್ತಿಕ ಬಾಂಡ್ ಪಡೆದು ಸೆಷನ್ಸ್ ನ್ಯಾಯಾಲಯ ಮಂಜೂರು ಮಾಡಿತ್ತು.