ಕುಂಬಳೆ: ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಸಮ್ಮೇಳನದ ಸ್ವಾಗತ ಸಮಿತಿ ರೂಪೀಕರಣ ಸಭೆ ಕುಂಬಳೆ ಪೈ ಕಾಂಪ್ಲೆಕ್ಸ್‍ನಲ್ಲಿ ಶುಕ್ರವಾರ ಜರಗಿತು. ಎಕೆಪಿಎ ಜಿಲ್ಲಾ ಅಧ್ಯಕ್ಷ ಕೆ.ಸಿ.ಅಬ್ರಹಾಂ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಾಂತ್ವನ ಸಮಿತಿ ಸಂಚಾಲಕ ಪ್ರಜೀಶ್ ಮಣಿ ದೀಪಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿ ಅದನ್ನು ಯೋಗ್ಯರೀತಿಯಲ್ಲಿ ಬಳಸಿಕೊಳ್ಳಲು ಛಾಯಾಗ್ರಾಹಕರು ತಯಾರಾಗಬೇಕಾದ ಕಾಲ ನಮ್ಮ ಮುಂದಿದೆ. ಯೂಟ್ಯೂಬ್ ಮೂಲಕ ಎಲ್ಲವನ್ನೂ ಕಲಿಯಬಹುದೆನ್ನುವ ಜನರ ಮಧ್ಯೆ ಸವಾಲುಗಳನ್ನು ಎದುರಿಸಿ ಮುಂದುವರಿಯಬೇಕಾಗಿದೆ. ಸದಸ್ಯರ ಅನುಕೂಲಕ್ಕಾಗಿ ಸಂಘಟನೆಯು ಹೊರತಂದ ವಿವಿಧ ಯೋಜನೆಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಕುಂಬಳೆಯಲ್ಲಿ ನಡೆಯಲಿರುವ ಜಿಲ್ಲಾ ಸಮ್ಮೇಳನವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ಸದಸ್ಯನಲ್ಲಿದೆ ಎಂದರು.
ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು, ಜಿಲ್ಲಾ ಉಪಾಧ್ಯಕ್ಷ ವೇಣು ವಿ.ವಿ., ರಾಜ್ಯ ಸಮಿತಿಯ ಪ್ರಶಾಂತ್ ತೈಕಡಪ್ಪುರಂ, ಜಿಲ್ಲಾ ಸಹಕಾರ್ಯದರ್ಶಿ ಅನೂಪ್ ಚಂದೇರ, ಅಶೋಕನ್ ಪೊಯಿನಾಚಿ, ಸುಧೀರ್, ವಿಜಯನ್ ಶೃಂಗಾರ್, ಸನ್ನಿ ಜೇಕಬ್, ಸುಕು ಸ್ಮಾರ್ಟ್, ರಾಜೇಂದ್ರನ್, ವಾಸು ಎ., ಎನ್.ಎ ಭರತನ್, ಜನಾರ್ದನನ್, ಸುನಿಲ್ ಕುಮಾರ್ ಶುಭಹಾರೈಸಿದರು. ಜಿಲ್ಲಾ ಕಾರ್ಯದರ್ಶಿ ಸುಗುಣನ್ ಇರಿಯ ಸ್ವಾಗತಿಸಿ, ಕೋಶಾಧಿಕಾರಿ ಸುನಿಲ್ ಕುಮಾರ್ ಪಿ.ಟಿ. ವಂದಿಸಿದರು. ನಾರಾಯಣ ಓಡಂಗಲ್ಲು ಪ್ರಾರ್ಥನೆ ಹಾಡಿದರು. ಜಿಲ್ಲೆಯ ವಿವಿಧ ವಲಯಗಳ ಸದಸ್ಯರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.