ಪ್ರಯಾಗ್‌ರಾಜ್: ಕುಂಭ ಮೇಳ ನಡೆಯುವ ಸಂದರ್ಭದಲ್ಲಿ ದೇಶದ ವಿವಿಧ ನಿಲ್ದಾಣಗಳಿಂದ 900ಕ್ಕೂ ಹೆಚ್ಚು ರೈಲುಗಳ ಕಾರ್ಯಾಚರಣೆಗೆ ಸಿದ್ಧತೆ ನಡೆಸಿರುವ ರೈಲ್ವೆ ಮಂಡಳಿಯು, ಲೊಕೊಮೊಟಿವ್ ಹಾಗೂ ಪ್ರಮುಖ ಯಾರ್ಡ್‌ಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದೆ.
ಈ ಕುರಿತು ರೈಲ್ವೆ ಮಂಡಳಿಯ ಅಧ್ಯಕ್ಷ ಹಾಗೂ ಸಿಇಒ ಜಯ ವರ್ಮಾ ಸಿನ್ಹಾ ಅವರ ಹೇಳಿಕೆಯನ್ನು ಪ್ರಯಾಗ್‌ರಾಜ್ ರೈಲ್ವೆ ಜಂಕ್ಷನ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, 'ರೈಲಿನಲ್ಲಿ ಅಸಹಜ ಸನ್ನಿವೇಶಗಳನ್ನು ಪತ್ತೆ ಮಾಡಲು ಈ ಕ್ಯಾಮೆರಾ ನೆರವಾಗಲಿದೆ' ಎಂದಿದ್ದಾರೆ.
ದೇಶದಾದ್ಯಂತ ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ರೈಲು ಅಪಘಾತಗಳ ನಂತರ ಎಚ್ಚೆತ್ತುಕೊಂಡಿರುವ ರೈಲ್ವೆ ಮಂಡಳಿಯು, ಕೃತಕ ಬುದ್ಧಿಮತ್ತೆ (AI) ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಪ್ರತಿ ರೈಲಿನ ಲೊಕೊಮೊಟಿವ್‌ಗಳಲ್ಲಿ ಮತ್ತು ಪ್ರಮುಖ ಯಾರ್ಡ್‌ಗಳಲ್ಲಿ ಅಳವಡಿಸಲು ನಿರ್ಧರಿಸಿದೆ.
'ಕುಂಭ ಮೇಳ ನಡೆಯುವ ಸಂದರ್ಭದಲ್ಲಿ ಹಳಿಗಳನ್ನು ದುಷ್ಕರ್ಮಿಗಳ ಹಾನಿಯಿಂದ ತಪ್ಪಿಸುವ ಉದ್ದೇಶದಿಂದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಈ ಕಾರ್ಯ ಕುಂಭ ಮೇಳಕ್ಕೂ ಪೂರ್ವದಲ್ಲೇ ಪುರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ' ಎಂದಿದ್ದಾರೆ.
'2019ರ ಕುಂಭ ಮೇಳದ ಸಂದರ್ಭದಲ್ಲಿ 530 ವಿಶೇಷ ರೈಲುಗಳು ಕಾರ್ಯಾಚರಣೆ ನಡೆಸಿದ್ದವು. 2025ರಲ್ಲಿ ಜರುಗುವ ಕುಂಭ ಮೇಳ ವಿಶೇಷ ತೀರ್ಥಸ್ನಾನಕ್ಕಾಗಿ 900 ರೈಲುಗಳು ಕಾರ್ಯಾಚರಣೆ ನಡೆಸುವ ಯೋಜನೆ ಇದೆ' ಎಂದಿದ್ದಾರೆ.
'ಬರಲಿರುವ ಕುಂಭ ಮೇಳದಲ್ಲಿ ಸುಮಾರು 30 ಕೋಟಿ ಯಾತ್ರಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ತುರ್ತು ಸಂದರ್ಭದಲ್ಲಿ ಜನದಟ್ಟಣೆ ನಿಯಂತ್ರಣ ಕುರಿತು ವಿವರವಾದ ಯೋಜನೆ ರಚಿಸಲಾಗುವುದು. ಪ್ರಯಾಗ್‌ರಾಜ್ ಜಂಕ್ಷನ್ ಅನ್ನು ಅಮೃತ್ ಭಾರತ್ ನಿಲ್ದಾಣವನ್ನಾಗಿ ಆಯ್ಕೆ ಮಾಡಲಾಗಿದೆ. ಮೊದಲ ಹಂತದಲ್ಲಿ ಕುಂಭ ಮೇಳ ಸಂದರ್ಭಕ್ಕಾಗಿ ಒಂದು ಭಾಗದ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದೆ. ಇಡೀ ನಿಲ್ದಾಣವನ್ನು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ' ಎಂದು ಸಿನ್ಹಾ ಹೇಳಿದ್ದಾರೆ.
ಕುಂಭ ಮೇಳ ಸಂದರ್ಭದಲ್ಲಿ ರೈಲುಗಳ ಸಂಚಾರಕ್ಕೆ ಯೋಜನೆ ರೂಪಿಸಲು ಉತ್ತರ ವಲಯ, ಉತ್ತರ ಕೇಂದ್ರ ಮತ್ತು ಈಶಾನ್ಯ ಪ್ರಾಂಟೀರ್ ರೈಲ್ವೆ ಪ್ರಧಾನ ವ್ಯವಸ್ಥಾಪಕರನ್ನು ಒಳಗೊಂಡ ಸಮಿತಿಯು ಈ ಮಾರ್ಗದ ವಿವಿಧ ನಿಲ್ದಾಣಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.