HEALTH TIPS

218 ಮೃತದೇಹಗಳು ಪತ್ತೆ

          ತಿರುವನಂತಪುರ: ವಯನಾಡ್‌ ಜಿಲ್ಲೆಯ ಚೂರಲ್‌ಮಲ ಮತ್ತು ಮುಂಡಕ್ಕೈನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನಾಪತ್ತೆಯಾದವರಿಗೆ ಶೋಧಕಾರ್ಯ ಶನಿವಾರವೂ ಮುಂದುವರಿಯಿತು.

             ಇದುವರೆಗೆ 218 ಮೃತದೇಹಗಳು ಪತ್ತೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. 200 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.

           ಅನಧಿಕೃತ ಮೂಲಗಳ ಪ್ರಕಾರ ಸತ್ತವರ ಸಂಖ್ಯೆ 365. 67 ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಶನಿವಾರ ಶೋಧ ಕಾರ್ಯದ ವೇಳೆ 15 ಮೃತದೇಹಗಳು ದೊರೆತಿವೆ.

             ರಕ್ಷಣಾ ಕಾರ್ಯಾಚರಣೆ ಅಂತಿಮ ಘಟ್ಟಕ್ಕೆ ತಲುಪಿದ್ದು, ಶನಿವಾರ ಮಧ್ಯಾಹ್ನದವರೆಗಿನ ಮಾಹಿತಿ ಪ್ರಕಾರ ಸುಮಾರು 206 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಗರಿಷ್ಠ ಸಂಖ್ಯೆಯ ಜೀವಗಳನ್ನು ರಕ್ಷಿಸುವುದು ನಮ್ಮ ಗುರಿಯಾಗಿತ್ತು. ಅವಶೇಷಗಳ ಅಡಿಯಲ್ಲಿ ಯಾರಾದರೂ ಜೀವಂತವಾಗಿದ್ದರೆ, ಅವರನ್ನು ಉಳಿಸುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಶನಿವಾರ ಹೇಳಿದರು.

          'ಪತ್ತೆಯಾದ ಮೃತದೇಹಗಳಲ್ಲಿ ಹೆಚ್ಚಿನವು ಚಾಲಿಯಾರ್‌ ನದಿಯಲ್ಲಿ ಶೋಧ ಕಾರ್ಯದ ವೇಳೆ ದೊರೆತಿವೆ. ಅಲ್ಲಿ ಶೋಧ ಕಾರ್ಯಕ್ಕೆ 40 ತಂಡಗಳನ್ನು ನಿಯೋಜಿಸಲಾಗಿದೆ. ಡ್ರೋನ್‌ಗಳು, ಥರ್ಮಲ್ ರೇಡಾರ್‌ ಸ್ಕ್ಯಾನರ್‌ ಹಾಗೂ 11 ಶ್ವಾನಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ' ಎಂದು ಮಾಹಿತಿ ನೀಡಿದರು.

        ಸೂಚಿಪಾರ ಜಲಪಾತದ ಬಳಿ ಶೋಧಕಾರ್ಯಕ್ಕೆ ತೆರಳಿ ಸಿಲುಕಿಕೊಂಡಿದ್ದ ಸಲೀಂ (36) ಮತ್ತು ಮೊಹ್ಸಿನ್ (32) ಎಂಬವರನ್ನು ಸೇನೆಯ ಹೆಲಿಕಾಪ್ಟರ್‌ ಮೂಲಕ ಶನಿವಾರ ರಕ್ಷಿಸಲಾಯಿತು.

ಒಂದೇ ಕುಟುಂಬದ 8 ಮಂದಿ ಮೃತದೇಹ ಪತ್ತೆ

                ಸಿದ್ದಾಪುರ : 'ವಯನಾಡ್‌ ಭೂಕುಸಿತ ದುರಂತದ ನಂತರ ನಾಪತ್ತೆಯಾಗಿದ್ದ, ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ ಮೂಲದ ದಿವ್ಯಾ (35), ಅವರ ಪುತ್ರ ಲಕ್ಷ್ಮೀಶ್‌ ಹಾಗೂ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ. ಮೃತದೇಹಗಳು ಶುಕ್ರವಾರ ಪತ್ತೆಯಾಗಿವೆ. ಇನ್ನೊಬ್ಬರು ಪತ್ತೆಯಾಗಿಲ್ಲ' ಎಂದು ಕುಟುಂಬದವರು ತಿಳಿಸಿದ್ದಾರೆ.

                ದಿವ್ಯಾ ವಯನಾಡ್‌ನ ಮಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.

'ತಾಯಿ ಹಾಗೂ ಮಗನ ಮೃತದೇಹ ಒಟ್ಟಿಗೇ ಪತ್ತೆಯಾಗಿದ್ದು, ಕರುಳು ಹಿಂಡುವಂತಿದೆ' ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

            ನೆಲ್ಯಹುದಿಕೇರಿಯ ನಲ್ವತ್ತೇಕರೆ ನಿವಾಸಿ ಪೊನ್ನಮ್ಮ ಎಂಬವರ ಮಗಳು ದಿವ್ಯಾ ಕೇರಳದ ಚೂರಲ್‌ಮಲದ ಯುವಕನನ್ನು ವಿವಾಹವಾಗಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries