ನವದೆಹಲಿ: ಪರಿಶಿಷ್ಟ ಜಾತಿಗಳ ಒಳವರ್ಗೀಕರಣ, ಒಳಮೀಸಲಾತಿಗೆ ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಜಾರಿಗೆ ಬರಬಾರದು ಎಂದು ಒತ್ತಾಯಿಸಿ ದಲಿತ, ಆದಿವಾಸಿ ಸಮುದಾಯಗಳ ರಾಷ್ಟ್ರೀಯ ಒಕ್ಕೂಟವು ಆಗಸ್ಟ್ 21ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ನವದೆಹಲಿ: ಪರಿಶಿಷ್ಟ ಜಾತಿಗಳ ಒಳವರ್ಗೀಕರಣ, ಒಳಮೀಸಲಾತಿಗೆ ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಜಾರಿಗೆ ಬರಬಾರದು ಎಂದು ಒತ್ತಾಯಿಸಿ ದಲಿತ, ಆದಿವಾಸಿ ಸಮುದಾಯಗಳ ರಾಷ್ಟ್ರೀಯ ಒಕ್ಕೂಟವು ಆಗಸ್ಟ್ 21ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಸಂವಿಧಾನವು ನೀಡಿರುವ ಹಕ್ಕುಗಳ ಮೇಲೆ ಈ ತೀರ್ಪು ಕೆಟ್ಟ ಪರಿಣಾಮ ಬೀರಲಿದೆ ಎಂದು ಒಕ್ಕೂಟ ತಿಳಿಸಿದೆ.
'ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಸರ್ಕಾರಿ ನೌಕರರ 'ನಿಖರ ಅಂಕಿಅಂಶ'ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಬಿಡುಗಡೆಗೊಳಿಸಬೇಕು, ಪ್ರಾತಿನಿಧ್ಯದ ಸರಿಯಾದ ಚಿತ್ರಣವನ್ನು ನೀಡಬೇಕು' ಎಂದು ಒಕ್ಕೂಟವು ಒತ್ತಾಯಿಸಿದೆ. ಸರ್ಕಾರವು ಉದ್ದೇಶಪೂರ್ವಕವಾಗಿ ಈ ಮಾಹಿತಿಯನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಅದು ದೂರಿದೆ.
'ಈ ವಿಚಾರವಾಗಿ ಸಂಬಂಧಿತ ವ್ಯಕ್ತಿಗಳ ಜತೆ ಚರ್ಚಿಸದೆ, ನ್ಯಾಯಾಲಯದಲ್ಲಿ ಕೆಟ್ಟ ನಿಲುವು ತಾಳಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಕೂಡಲೇ ವಜಾಗೊಳಿಸಬೇಕು' ಎಂದು ಒಕ್ಕೂಟದ ಅಧ್ಯಕ್ಷ ಅಶೋಕ್ ಭಾರ್ತಿ ಒತ್ತಾಯಿಸಿದರು.
'ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಸಮುದಾಯಗಳು ಪರಸ್ಪರ ಹೊಡೆದಾಡಿಕೊಳ್ಳುವುದನ್ನು ಸರ್ಕಾರ ಬಯಸುತ್ತಿದೆ' ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೇಂದ್ರ ಸರ್ಕಾರದ ಉದ್ಯೋಗಿಗಳಲ್ಲಿ ಶೇಕಡಾ 60ರಷ್ಟು ಮಂದಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ ಎಂದು ಅವರು ಹೇಳಿದರು. ಆದರೆ, ಹಿಂದುಳಿದ ಸಮುದಾಯಗಳನ್ನು ವಿಭಜಿಸುವ ಸಂಕಥನವನ್ನು ಸರ್ಕಾರ ಹುಟ್ಟುಹಾಕುತ್ತಿದೆ ಎಂದರು.
'ಮೋದಿ ನೇತೃತ್ವದ ಸರ್ಕಾರವು ಹಿಂದೂ ರಾಷ್ಟ್ರ ನಿರ್ಮಾಣ ಮಾಡುವುದಾಗಿ ಹೇಳುತ್ತಿದೆ. ಎಸ್‌ಸಿ, ಎಸ್‌ಟಿ, ಒಬಿಸಿಗಳ ನಡುವೆ ತಾರತಮ್ಯ ಸೃಷ್ಟಿಸಿ ಯಾವ ಹಿಂದೂ ರಾಷ್ಟ್ರ ನಿರ್ಮಾಣ ಮಾಡುತ್ತೀರಿ? ಬಿಜೆಪಿಯ ಹಿಂದೂ ರಾಷ್ಟ್ರವು ನಿಜವಾಗಿ ಸವರ್ಣೀಯರ ರಾಷ್ಟ್ರವಾಗಿದೆ. ಅಲ್ಲಿ ಹಿಂದುಳಿದವರಿಗೆ ನ್ಯಾಯ ಸಿಗುವುದಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.