ಚೆನ್ನೈ: ಅಮೆರಿಕದ ಕೈಗಾರಿಕೋದ್ಯಮಿ ಡಾ. ಕೃಷ್ಣ ಚಿವುಕುಲಾ ಅವರು ಮದ್ರಾಸ್ ಐಐಟಿಗೆ ₹228 ಕೋಟಿ ದತ್ತಿ ನಿಧಿ ನೀಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಇದನ್ನು ಐಐಟಿ ಮದ್ರಾಸ್ ಈವರೆಗೆ ಸ್ವೀಕರಿಸಿರುವ ದತ್ತಿ ಹಣದಲ್ಲೇ ಏಕೈಕ ಅತಿದೊಡ್ಡ ದೇಣಿಗೆ ಎಂದು ಪರಿಗಣಿಸಲಾಗಿದೆ.
'ಸುಮಾರು 53 ವರ್ಷಗಳ ನಂತರ, ನಮ್ಮ ಸಂಸ್ಥೆಯ ಹಳೆಯ ವಿದ್ಯಾರ್ಥಿ ಡಾ. ಕೃಷ್ಣ ಚಿವುಕುಲ ಅವರು ಐಐಟಿ-ಮದ್ರಾಸ್‌ಗೆ ₹228 ಕೋಟಿ ದತ್ತಿ ನೀಡಲು ಬಂದಿದ್ದಾರೆ. 8ನೇ ತರಗತಿವರೆಗೆ ತೆಲಗು ಮಾಧ್ಯಮದಲ್ಲಿ ಶಿಕ್ಷಣ ಪಡೆದಿದ್ದ ಅವರು 1970ರ ದಶಕದಲ್ಲಿ ನಮ್ಮ ಸಂಸ್ಥೆಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಓದಿದ್ದರು. ನಂತರ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ಅಮೆರಿಕದಲ್ಲಿ ವಿಮಾನಗಳ ಬಿಡಿಭಾಗಗಳ ತಯಾರಿಕೆಯ ಕಂಪನಿಗಳನ್ನು ಸ್ಥಾಪಿಸಿದ್ದಾರೆ' ಎಂದು ಕಾಮಕೋಟಿ ಸುದ್ದಿಗಾರರಿಗೆ ತಿಳಿಸಿದರು.
2023-24ರ ಅವಧಿಯಲ್ಲಿ ಸಂಸ್ಥೆಯು ₹513 ಕೋಟಿ ನಿಧಿಯನ್ನು ಸಂಗ್ರಹಿಸಿದೆ. ಹಿಂದಿನ ಹಣಕಾಸು ವರ್ಷಕ್ಕಿಂತ ಶೇ 135 ಹೆಚ್ಚು ನಿಧಿ ಸಂಗ್ರಹವಾಗಿದೆ. ಚಿವುಕುಲ ಅವರ ಕೊಡುಗೆಯನ್ನು ಗುರುತಿಸುವ ಭಾಗವಾಗಿ, ಅಡ್ಯಾರ್‌ನಲ್ಲಿರುವ ತನ್ನ ವಿಸ್ತಾರವಾದ ಕ್ಯಾಂಪಸ್‌ನಲ್ಲಿ ಕೃಷ್ಣ ಚಿವುಕುಲ ವಿಭಾಗವನ್ನು ಮದ್ರಾಸ್ ಐಐಟಿ ಸ್ಥಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿವುಕುಲ ಅವರ ವೃತ್ತಿಪರ ಶ್ರೇಷ್ಠತೆ ಮತ್ತು ಕೊಡುಗೆಗಳನ್ನು ಗುರುತಿಸಿ 2015ರಲ್ಲಿ ಅವರಿಗೆ ಮದ್ರಾಸ್ ಐಐಟಿಯು 'ವಿಶಿಷ್ಟ ಹಳೆಯ ವಿದ್ಯಾರ್ಥಿ ಪ್ರಶಸ್ತಿ'ಯನ್ನು ನೀಡಿ ಗೌರವಿಸಿತ್ತು.