ಗಾಂಧಿನಗರ: ಗುಜರಾತ್‌ನ ಭುಜ್ ನಗರದ ಹೊರವಲಯದಲ್ಲಿರುವ ಮಾಧಾಪರ್ ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವರದಿಯಾಗಿದೆ.
2011ರಲ್ಲಿ 17 ಸಾವಿರವಿದ್ದ ಈ ಗ್ರಾಮದ ಒಟ್ಟು ಜನಸಂಖ್ಯೆ ಈಗ 32 ಸಾವಿರ ಎಂದು ಅಂದಾಜಿಸಲಾಗಿದೆ. ಬ್ಯಾಂಕ್‌ನಲ್ಲಿರುವ ಗ್ರಾಮಸ್ಥರ ಒಟ್ಟು ಹೂಡಿಕೆಯು ₹7 ಸಾವಿರ ಕೋಟಿಯಷ್ಟಿದೆ.
ಮಾಧಾಪರ್‌ದಲ್ಲಿ ಹೆಚ್ಚಾಗಿ ಪಟೇಲ್ ಸಮುದಾಯದ ಜನರಿದ್ದಾರೆ. ಎಚ್‌ಡಿಎಫ್‌ಸಿ, ಎಸ್‌ಬಿಐ, ಪಿಎನ್‌ಬಿ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಹಾಗೂ ಯೂನಿಯನ್ ಬ್ಯಾಂಕ್ ಸೇರಿ ಗ್ರಾಮದಲ್ಲಿ 17 ಬ್ಯಾಂಕ್‌ಗಳಿವೆ. ಒಂದು ಗ್ರಾಮದಲ್ಲಿ ಇಷ್ಟೊಂದು ಬ್ಯಾಂಕ್‌ಗಳಿರುವುದು ಅಪರೂಪವೇ ಆದರೂ, ಇನ್ನೂ ಕೆಲ ಬ್ಯಾಂಕ್‌ಗಳು ಮಾಧಾಪರ್ ಗ್ರಾಮದಲ್ಲಿ ತಮ್ಮ ಶಾಖೆಗಳನ್ನು ತೆರೆಯಲು ಯೋಜನೆ ಹೊಂದಿವೆ ಎಂದು ವರದಿಯಾಗಿದೆ.
ಗ್ರಾಮದಲ್ಲಿ ಒಟ್ಟು 20 ಸಾವಿರ ಮನೆಗಳಿವೆ. ಇದರಲ್ಲಿ ಸುಮಾರು 1,200 ಕುಟುಂಬಗಳು ವಿದೇಶಗಳಲ್ಲಿ ನೆಲೆಸಿವೆ. ಅದರಲ್ಲೂ ಆಫ್ರಿಕಾದಲ್ಲಿ ನಿರ್ಮಾಣ ಕ್ಷೇತ್ರದಲ್ಲಿರುವವರೇ ಹೆಚ್ಚು. ಉಳಿದ ಕೆಲವರು ಬ್ರಿಟನ್, ಆಸ್ಟ್ರೇಲಿಯಾ, ಅಮೆರಿಕ ಹಾಗೂ ನ್ಯೂಜಿಲೆಂಡ್‌ನಲ್ಲಿ ನೆಲೆಸಿದ್ದಾರೆ. ಆದರೆ ಇವರೆಲ್ಲರೂ, ತಮ್ಮ ಗಳಿಕೆಯ ಮೊತ್ತವನ್ನು ಗ್ರಾಮದ ಬ್ಯಾಂಕ್‌ಗಳಿಗೆ ಕಳುಹಿಸುತ್ತಿರುವುದು ವಿಶೇಷ.
'ಗ್ರಾಮದಲ್ಲಿ ಮೂಲಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ಹಾಗೂ ರಸ್ತೆಗಳು ನಿರ್ಮಾಣವಾಗಿವೆ. ಬಂಗಲೆಗಳಿವೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳಿವೆ. ಕೆರೆ ಹಾಗೂ ಗುಡಿಗಳ ಅಭಿವೃದ್ಧಿಯಾಗಿವೆ' ಎಂದು ಬ್ಯಾಂಕ್‌ನ ವ್ಯವಸ್ಥಾಪಕರು ತಿಳಿಸಿದ್ದಾರೆ.