ನವದೆಹಲಿ: ಹಿಂಡನ್‌ಬರ್ಗ್ ಆರೋಪಕ್ಕೆ ಸಂಬಂಧಿಸಿದಂತೆ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ರಾಜೀನಾಮೆ ನೀಡುವಂತೆ ಮತ್ತು ಆರೋಪಗಳ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸುವಂತೆ ಆಗ್ರಹಿಸಿ ಆಗಸ್ಟ್ 22ರಂದು ಕಾಂಗ್ರೆಸ್ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದೆ.
ನವದೆಹಲಿ: ಹಿಂಡನ್‌ಬರ್ಗ್ ಆರೋಪಕ್ಕೆ ಸಂಬಂಧಿಸಿದಂತೆ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ರಾಜೀನಾಮೆ ನೀಡುವಂತೆ ಮತ್ತು ಆರೋಪಗಳ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸುವಂತೆ ಆಗ್ರಹಿಸಿ ಆಗಸ್ಟ್ 22ರಂದು ಕಾಂಗ್ರೆಸ್ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದೆ.
ಮುಂದಿನ ವಿಧಾನಸಭಾ ಚುನಾವಣೆಗಳ ಸಿದ್ದತೆ ಕುರಿತಂತೆ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಘಟಕದ ಅಧ್ಯಕ್ಷರು, ರಾಜ್ಯ ಉಸ್ತುವಾರಿಗಳ ಜೊತೆ ನಡೆದ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ನಿರ್ಧಾರ ಪ್ರಕಟಿಸಿದ್ದಾರೆ.
'ಅದಾನಿ ಸಮೂಹ ಮತ್ತು ಸೆಬಿ ಅಧ್ಯಕ್ಷೆ ನಡುವಿನ ಸಂಬಂಧದ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕಿದೆ. ಷೇರು ಮಾರುಕಟ್ಟೆಯಲ್ಲಿ ಸಣ್ಣ ಹೂಡಿಕೆದಾರರಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕಿದೆ' ಎಂದು ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ಎಕ್ಸ್‌ನಲ್ಲಿ ಹೇಳಿದರು.
'ಮೋದಿ ಸರ್ಕಾರ ಈ ತಕ್ಷಣವೇ ಸೆಬಿ ಅಧ್ಯಕ್ಷರಿಂದ ರಾಜೀನಾಮೆ ಕೇಳಬೇಕು ಮತ್ತು ಜಂಟಿ ಸಂಸದೀಯ ಸಮಿತಿ ರಚಿಸಬೇಕು' ಎಂದು ಒತ್ತಾಯಿಸಿದರು.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಸಿ.ವೇಣುಗೋಪಾಲ್, 'ಸೆಬಿ ಅಧ್ಯಕ್ಷರ ರಾಜೀನಾಮೆ ಮತ್ತು ಜೆಪಿಸಿ ರಚಿಸುವಂತೆ ಒತ್ತಾಯಿಸಿ ಆಗಸ್ಟ್ 22ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ಮಾಡುವ ಬಗ್ಗೆ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಗಿದೆ' ಎಂದರು.
ಪ್ರಕರಣವೇನು?
ಅದಾನಿ ಸಮೂಹ ವಹಿವಾಟು ನಡೆಸುತ್ತಿದ್ದ ಬರ್ಮುಡಾ ಮತ್ತು ಮಾರಿಷಸ್‌ನ 'ಶೆಲ್' ಕಂಪನಿಗಳಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಪಾಲುದಾರಿಕೆ ಹೊಂದಿದ್ದಾರೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್ ಕಂಪನಿ ಆಗಸ್ಟ್ 10ರಂದು ಆರೋಪ ಮಾಡಿತ್ತು.
ಆರೋಪಕ್ಕೆ ಪ್ರತಿಕ್ರಿಯಿಸಿರುವ ಬುಚ್ ದಂಪತಿ, 'ಹಿಂಡೆನ್‌ಬರ್ಗ್ ರಿಸರ್ಚ್ ಸೆಬಿಯ ವಿಶ್ವಾಸಾರ್ಹತೆ ಮೇಲೆ ದಾಳಿ ನಡೆಸಿದೆ' ಎಂದಿದ್ದಾರೆ.