ಕರಾಚಿ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪ್ರಕ್ಷುಬ್ಧ ಬಲೂಚಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ 23 ಜನರನ್ನು ಕೊಂದಿದ್ದಾರೆ. ಬಸ್‌ನಿಂದ ಜನರನ್ನು ಕೆಳಗಿಳಿಸಿ ಗುರುತು ಪತ್ತೆ ಹಚ್ಚಿ ಗುಂಡು ಹಾರಿಸಿದ್ದಾರೆ ಎಂದು ವರದಿ ತಿಳಿಸಿದೆ. ಬಲೂಚಿಸ್ತಾನದ ಮುಸಖೇಲ್ ಜಿಲ್ಲೆಯಲ್ಲಿ ಈ ದುಷ್ಕೃತ್ಯ ನಡೆದಿದೆ.
ಈ ಎರಡು ಪ್ರಾಂತ್ಯಗಳ ನಡುವಿನ ಹೆದ್ದಾರಿಯಲ್ಲಿ ಬಸ್‌ಗಳನ್ನು ಅಡ್ಡಗಟ್ಟಿದ ಬಂದೂಕುಧಾರಿಗಳು ಪ್ರಯಾಣಿಕರನ್ನು ಇಳಿಸಿ ಒಬ್ಬೊಬ್ಬರಿಗೆ ಗುಂಡಿಕ್ಕಿದ್ದಾರೆ ಎಂದು ಎಸಿ ಮುಸಾಖೈಲ್ ನಜೀಬ್ ಕಕ್ಕರ್ ತಿಳಿಸಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ಮೃತರೆಲ್ಲರೂ ಪಂಜಾಬ್ ಪ್ರಾಂತ್ಯಕ್ಕೆ ಸೇರಿದವರಾಗಿದ್ದು, ಘಟನೆ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.ಅಲ್ಲದೆ, ಶಸ್ತ್ರಸಜ್ಜಿತರ ಗುಂಪು 10 ವಾಹನಗಳಿಗೂ ಬೆಂಕಿ ಹಚ್ಚಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಮೃತದೇಹಗಳನ್ನು ಆಸ್ಪತ್ರೆಗಳಿಗೆ ರವಾನಿಸಿದ್ದಾರೆ.
ಈ ಭಯೋತ್ಪಾದಕ ಕೃತ್ಯವನ್ನು ಬಲೂಚಿಸ್ತಾನದ ಮುಖ್ಯಮಂತ್ರಿ ಸರ್ಫರಾಜ್ ಬುಗ್ಟಿ ತೀವ್ರವಾಗಿ ಖಂಡಿಸಿದ್ದಾರೆ.
4 ತಿಂಗಳ ಹಿಂದಷ್ಟೇ ಪಂಜಾಬ್‌ನಲ್ಲೂ ಇಂತದ್ದೇ ಘಟನೆ ನಡೆದಿತ್ತು. ಜನರನ್ನು ವಾಹನಗಳಿಂದ ಕೆಳಗಿಳಿಸಿ ಗುಂಡು ಹಾರಿಸಲಾಗಿತ್ತು. ಆಗ 9 ಮಂದಿ ಮೃತಪಟ್ಟಿದ್ದರು.